ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Sep 2, 2010

ಜಗದೋದ್ಧಾರಕ ಶ್ರೀಕೃಷ್ಣ



ಇಂದಿನಿಂದ ನಿರ್ದಿಷ್ಟ ಕಾಲ ಸರಣಿಯಲ್ಲಿ ಭಾರತೀಯ ಸಂಸ್ಕೃತಿ - ಪುರಾಣ - ಮಹಾಭಾರತ - ರಾಮಾಯಣ ... ಹೀಗೆ Indian Mythology ಯಲ್ಲಿ ಬರುವ ಪಾತ್ರಗಳ ಪರಿಚಯ ..ಇತ್ಯಾದಿ ಮಾಹಿತಿಗಳನ್ನೊಳಗೊಂಡ ಲೇಖನ ಸರಣಿ ಪ್ರಾರಂಭವಾಗುತ್ತಿದೆ. ಖಂಡಿತ ಇದಕ್ಕೆ ನೀವೂ ನಿಮ್ಮ ಮಾಹಿತಿಯನ್ನ ನೀಡಬಹುದು Comments ಗಳ ಮೂಲಕ. 
***
ಈ ಲೇಖನ ಸರಣಿಯಲ್ಲಿ ನಿಮಗೆ  : ಪುರಾಣ ಕತೆಗಳಲ್ಲಿ ಬರುವ ಪಾತ್ರಗಳು - ಅವುಗಳ ನಡುವಿನ ಸಂಬಂಧಗಳು ; ದೇಶ - ರಾಜ - ರಾಜ್ಯ ಸಂಬಂಧಗಳು ; .. ಹೀಗೆ ಪರೀಕ್ಷಾ ದೃಷ್ಟಿಯಿಂದ ಅನುಕೂಲವಾಗುವ ಸಮಗ್ರ ಮಾಹಿತಿ ದೊರೆಯುತ್ತದೆ !!

.
:: ಜಗದೋದ್ಧಾರಕ ಶ್ರೀಕೃಷ್ಣ ::




ಇತಿಹಾಸ ಆಗಬೇಕಾದರೆ ಕಾಲಪುರುಷ ಓಡುತ್ತಲೇ ಇರಬೇಕು! ಆ ಕಾಲನಿಗೆ ದೈವನಿರ್ಮಿತ ಗತಿವೇಗವೂ ಒಂದು ಮಂಗಳಮಯ ದಿಕ್ಕೂ ಇರುವುದೆಂಬುದನ್ನು ವೇದಾಂತಿಗಳೂ ಯೋಗಿಗಳೂ ಭಗವದ್ ಭಕ್ತರೂ ಮಾತ್ರ ಬಲ್ಲರು. ಸಾಮಾನ್ಯ ಮುಗ್ದ ಜನರಿಗೆ ಕಾಲನ ಗತಿಯಲ್ಲಿ ಜನರೂ ಪಶುಪಕ್ಷಿ ಕೀಟಾದಿಗಳೂ ಏಕೆ ಹುಟ್ಟಿ ಸಾಯುವರೆಂಬುದೇ ತಿಳಿಯದೆ, ಇದೆಲ್ಲ ಅರ್ಥವಿಲ್ಲದ ವ್ಯಾಪಾರ ಎಂಬ ಭ್ರಮೆ! ಇದೊಂದು ಅಪಾಯಕಾರೀ ವೈಚಿತ್ರ್ಯವೆನಿಸಿದರೆ, ದುಷ್ಟರೂ ಮಹತ್ವ್ತಾಕಾಂಕ್ಷಿಗಳೂ ಪರರನ್ನು ಹಿಂಸೆಮಾಡುವವರೂ ತಾವೇ ದೇವರೆಂಬ ಸಲ್ಲದ  ಅಹಂಕಾರಭಾವದಲ್ಲಿ ಕಾಲನ ಹೆಗಲ ಮೇಲೇರಿ ಕುಳಿತು, ಅವನ ಗತಿಯ ವೇಗವನ್ನೂ ದಿಕ್ಕನ್ನೂ ತಮ್ಮ ಸ್ವಾರ್ಥ ಗುರಿಯತ್ತ ಆಗಾಗ ತಿರುಗಿಸಲು ಯತ್ನಿಸುವುದು ತೀರಾ ಅಪಾಯಕಾರಿ ವೈಚಿತ್ರ್ಯ!
 
ಕಾಲನಿಗೆ ಇದು ಒಗ್ಗದ ದಾಸ್ಯ. ದಾಸನಾದವನು ಹಣಕ್ಕಾಗಿ ಯಾವ ಯಜಮಾನನಿಗಾದರೂ ಮಾರಿಕೊಳ್ಳುವುದು ಸಹಜ ಎಂಬ ಈ ಲೋಕದ ಕೆಲವರ ನ್ಯಾಯ ಕಾಲನಿಗೆ ಅನ್ವಯವಾಗುವುದೇ ಇಲ್ಲ. ಏಕೆಂದರೆ ಅವನದು ಸ್ವಯಂಪ್ರಯೋಜನರೂಪದ ದಾಸ್ಯ. ಅದು ದೇವರ ಸಲುವಾಗಿ ಮಾತ್ರ ನಡೆಯುವುದು. ಧೂರ್ತ ಜನರ ಘೋರವ್ಯಾಪಾರಗಳಿಗೂ ಕಾಲ ಅಷ್ಟಿಷ್ಟು ಅವಕಾಶ ಕೊಟ್ಟು, ತಾನು ಸಹನೆ ತೋರಿಸುತ್ತಾನೆ. ಕೊನೆಗೆ ಅವರನ್ನು ತಾನೇ ಮುಗಿಸುವುದೂ ಉಂಟು!  ಇದಕ್ಕಾಗಿ ಕಾಲನ ಯಜಮಾನನಾದ ಭಗವಂತ, ಕಾಲಕಾಲಕ್ಕೆ ತಾನೇ ದೇಶಕಾಲಗಳ ಸಂಧಿಯಲ್ಲಿ ಕಾಣಿಸಿಕೊಂಡು, ಕಾಲನಿಗೆ ಧೂರ್ತರು ಕಟ್ಟಿದ ಕಟ್ಟೆಯನ್ನು ಒಡೆದುಹಾಕಿ, ಅವನ ಪ್ರವಾಹ ಮತ್ತೆ ಸುಗಮವಾಗುವಂತೆ ಮಾಡುತ್ತಾನೆ. ಕಾಲವಿರೋಧಿಗಳನ್ನು ಕಾಲವಶರಾಗಿಸುತ್ತಾನೆ.- ಅದೇ ಅವತಾರ ಎನ್ನುವುದು.

"ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ" 
ಅಭ್ಯುತ್ಥಾನಂ ಅಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ.
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕ್ರತಾಂ
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ"

ನಾನೀಗ ಹೇಳಲೊರಟಿರುವುದು " ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿ,  ಧರ್ಮವನ್ನು ಸಂಸ್ಥಾಪನೆ ಮಾಡಿ, ಲೋಕವನ್ನು ಉದ್ಧರಿಸಲು ದ್ವಾಪರಯುಗದಲ್ಲಿ ಭುವಿಯಲ್ಲಿ ಅವತರಿಸಿದ ಜಗದೋದ್ದಾರಕ ಶ್ರೀಕ್ಠಷ್ಣ ನ ಬಗ್ಗೆ ಎಂಬುದು ತಮಗೆಲ್ಲರಿಗೂ ತಿಳಿದೇ ಇದೆ. ಈ ಬಗ್ಗೆ ಸವಿವರವಾಗಿ ವಿವರಿಸದೇ ಸಂಕ್ಷಿಪ್ತವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ. ಕಾರಣ ಶ್ರೀಕೃಷ್ಣನ ಬಗ್ಗೆ ಹೇಳುತ್ತಾ ಹೋದರೆ ಅದು ಮುಗಿಯುವುದೇ ಇಲ್ಲ ಎನ್ನುವಷ್ಟು ಹೇಳಬಹುದು.  ಶ್ರೀ ಕ್ಠಷ್ಣಾಷ್ಟಮಿಯ ಈ ಶುಭ ಸಂದರ್ಭದಲ್ಲಿ ಈ ಲೇಖನವನ್ನು ಪ್ರಸ್ತುತ ಪಡಿಸಲು ನನಗೆ ಅತೀವ ಸಂತೋಷವೆನಿಸುತ್ತಿದೆ.


ಮಥುರೆ ಮುಕ್ತಿ ಧಾಮಗಳಲ್ಲೇ ಎರಡನೇ ಸ್ಥಾನದಲ್ಲಿರುವಂಥದ್ದು. ಮೊದಲನೇ ಸ್ಥಾನ ಇರುವುದು ಅಯೋಧ್ಯೆಗೆ. ಮಥುರೆಯ ರಾಜ ಉಗ್ರಸೇನ. ಈತ ಬಹಳ ಸ್ವಾಭಿಮಾನಿ. ಈತನ ಮಗನೇ "ಕಂಸ"-   ಕಂಸನು ದುರಾಡಳಿತಕ್ಕೆ ಹೆಸರಾಗಿದ್ದವನು. ಇವನ ಕಾಲದಲ್ಲಿ ಕ್ರೌರ್ಯ ಎಡೆಬಿಡದೆ ಸಾಗಿತ್ತು. ಇವನ ಅಪ್ಪಣೆಗಳನ್ನು ಎದುರಿಸುವವರಿಲ್ಲದೇ, ತಡೆಯುವವರಿಲ್ಲದೇ ಇವನ ಸೆರೆಮನೆ ಶತ್ರುಗಳಿಂದ ತುಂಬಿತ್ತು. ಅಲ್ಲದೇ ಕಂಸ ಸಾಕಷ್ಟು ಯಾದವ ಯುವಕರನ್ನು ಕೊಲ್ಲಿಸಿ, ಅಲ್ಲಿನ ಯುವತಿಯರನ್ನು ವಿಷಕನ್ಯೆರನ್ನಾಗಿ ಮಾರ್ಪಡಿಸಿದ್ದ.  ಒಟ್ಟಾರೆ ಮಥುರಾ ನಗರಿ ಇವನ ಆಡಳಿತದಿಂದ ರೋಸಿಹೋಗಿತ್ತು. ಯಾದವರು ಕಂಸನನ್ನು ತೀವ್ರವಾಗಿ ದ್ವೇಷಿಸುತ್ತಿದ್ದ ಕಾಲ ಅದು.

ವಸುದೇವ :   ಈತ ಯಾದವರ ಮುಖಂಡ. ಈತನಿಗೆ ಇಬ್ಬರು ಹೆಂಡತಿಯರು. ಒಬ್ಬಳು ರೋಹಿಣೀದೇವಿ (ಬಲರಾಮನ ತಾಯಿ, ಬಲರಾಮನ ಹೆಂಡತಿಯ ಹೆಸರು ರೇವತಿ ಈಕೆ ರೈವತನ ಮಗಳು) ಹಾಗೂ ಇನ್ನೊಬ್ಬಳು ದೇವಕಿ (ಕಂಸನ ದೊಡ್ಡಪ್ಪ ದೇವಕನ ಮಗಳು - ಕ್ಠಷ್ಣನ ತಾಯಿ...- ಈ ವಿವಾಹದಲ್ಲಿ  ಯಾದವರನ್ನೆಲ್ಲಾ ತನ್ನೆಡೆಗೆ ಸೆಳೆಯಬೇಕೆಂಬ ಕಂಸನ ಸ್ವಾರ್ಥವೂ ಇರುತ್ತದೆ ).  ದೇವಕಿಯ ಮದುವೆ ಸಂದರ್ಭದಲ್ಲಿ ಕಂಸನನ್ನು ಕುರಿತು ಅಶರೀರ ವಾಣಿಯೊಂದು ಗೋಚರಿಸಿ, " ದೇವಕಿಯ ಗರ್ಭದಲ್ಲಿ ಜನಿಸುವ ಎಂಟನೇ ಶಿಶುವಿನಿಂದ ನಿನಗೇ ಮೃತ್ಯು" ಎಂದು ಹೇಳುತ್ತದೆ.  ಅಂದಿನಿಂದ ದೇವಕಿ-ವಸುದೇವರಿಗೆ ಕಂಸ ಸೆರೆವಾಸ ವಿಧಿಸುತ್ತಾನೆ. ದೇವಕಿಗೆ ಜನಿಸಿದ ಎಲ್ಲಾ 7 ಶಿಶುಗಳನ್ನು ಹತ್ಯೆ ಮಾಡುತ್ತಾನೆ.  ಎಂಟನೇ ಶಿಶುವೇ ಭುವಿಗವತರಿಸಿದ ಸಾಕ್ಷಾತ್  ಭಗವಂತ ಶ್ರೀಕೃಷ್ಣ.


ಅದು ಜಗತ್ತಿನ ಭಾಗ್ಯೋದಯದ ಅಮೃತ ಘಳಿಗೆ! ಆ ಕಾಲವೇ ದ್ವಾಪರ ಯುಗಾಂತ್ಯದ ಆ ಅದ್ಭುತ ಶ್ರೀಮುಖನಾಮ ಸಂವತ್ಸರದ ಶ್ರಾವಣ ಬಹುಳ(ಕೃಷ್ಣ) ಅಷ್ಟಮಿ ರಾತ್ರಿ ಹನ್ನೆರಡು ಗಂಟೆಯ ಸಮಯ. ಬಾರ್ಹಸ್ಪತ್ಯ ರೀತ್ಯಾ ಪಾರ್ಥಿವ ನಾಮ ಸಂವತ್ಸರ. ರೋಹಿಣಿ ನಕ್ಷತ್ರ, ಶುಕ್ರವಾರ. ಅಂದಿಗೆ ಜಗತ್ತು ಸೃಷ್ಟಿಯಾಗಿ 195,58,79,894 ವರ್ಷಗಳಾಗಿವೆ. ಇಂತಹ ಸುಮುಹೂರ್ತದಲ್ಲಿ ಕೃಷ್ಣನ ಜನನವಾಗಿದೆ. ನಂತರ ಕೃಷ್ಣನನ್ನು ವಸುದೇವ ಗೋಕುಲಕ್ಕೆ ದೈವಸಂಕಲ್ಪದಿಂದ ಕೊಂಡೊಯ್ಯುತ್ತಾನೆ. ಉಳಿದದ್ದೆಲ್ಲಾ ಇತಿಹಾಸ.





 
 "ಕ್ಠಷ್ಣ"  ಎಂದರೆ  ಆಕರ್ಷಿಸುವವ ಎಂದು ಅರ್ಥ.  ಈತ ಬಾಲ್ಯ ಕಳೆದದ್ದು ಗೋಕುಲದಲ್ಲಿ. ಸಾಕು ತಂದೆ ತಾಯಿಯರಾದ ನಂದಗೋಪ ಮತ್ತು ಯಶೋದೆಯ ಮಡಿಲಲ್ಲಿ. ಬಾಲಕೃಷ್ಣನ ಲೀಲೆಗಳು ಗೋಕುಲದಲ್ಲಿ ಒಂದೇ ಎರಡೇ. ನವನೀತ (ಬೆಣ್ಣೆ) ಪ್ರಿಯನ ಚೇಷ್ಟೆಗಳು ಗೋಕುಲ ಜನರನ್ನು ಸತಾಯಿಸುತ್ತಿದ್ದರೂ ಅವುಗಳಲ್ಲೇ ಜನ ಆನಂದದಿಂದ ಪುಲಕಿತರಾಗುತ್ತಿದ್ದುದ್ದು ಸುಳ್ಳೇನಲ್ಲ.






ತನ್ನನ್ನು ಕೊಲ್ಲಲಿರುವ ಮಗು ಗೋಕುಲದಲ್ಲಿ ಬೆಳೆಯುತ್ತಿರುವ ವಿಷಯ ತಿಳಿದು, ಆ ಶಿಶುವನ್ನು ಹತ್ಯೆಗೈಯಲು ಕಂಸ ನಾನಾ ಸಂಚು ರೂಪಿಸಿ  (ಈ ನಿಟ್ಟಿನಲ್ಲಿ ಬಂದವರೇ ಪೂತನಿ, ಶಕಟಾಸುರ, ಕಾಲಯವನ,  ತೃಣಾವರ್ತ, ಬಕ,ಅಘ, ಅರಿಷ್ಟ, ಕೇಶಿ ಮುರ, ಜರಾಸಂಧ, ಪೌಂಡ್ರಕ ) ಕೊನೆಗೇ ತಾನೇ ಹತನಾಗುತ್ತಾನೆ.
ಶ್ರೀಕೃಷ್ಣ ಮಥುರೆಯಿಂದ ಗೋಕುಲಕ್ಕೆ, ಗೋಕುಲದಿಂದ ಮಥುರೆಗೆ, ಮಥುರೆಯಿಂದ ದ್ವಾರಕೆಗೆ, ದ್ವಾರಕೆಯಿಂದ ಕೊನೆಗೆ ಹಸ್ತಿನಾವತಿ ಹೀಗೆ ತಾನು ಹೋದಡೆಯಲ್ಲೆಲ್ಲಾ ಜನರನ್ನಷ್ಟೇ ಅಲ್ಲಾ ಈ ಪುಣ್ಯ ಭೂಮಿಯನ್ನೇ ಪಾವನಗೊಳಿಸುತ್ತಾನೆ.





ಶ್ರೀಕೃಷ್ಣನ ವಿವಾಹ :  ಶ್ರೀ ಕೃಷ್ಣನಿಗೆ 16,000 ಗೋಪಿಕಾ ಸ್ರ್ತೀಯರು ಪ್ರಿಯತಮೆಯರಿದ್ದರು. ಆದರೆ ಅವನ ಹೆಂಡತಿಯರೆಂದರೆ :

1. ರುಕ್ಮಿಣಿ - ವಿದರ್ಭದ ದೊರೆ ಭೀಷ್ಮಕನ ಮಗಳು - ರುಕ್ಮಿಯ ತಂಗಿ.  ಈಕೆಗೆ ಶಿಶುಪಾಲನೊಂದಿಗೆ ವಿವಾಹ ನಿಶ್ಚಿತವಾದಾಗ ಅವನೊಡನೆ ಹೋರಾಡಿ ರುಕ್ಮಿಣಿಯನ್ನು ಕೃಷ್ಣ ವರಿಸುತ್ತಾನೆ. (ಕೃಷ್ಣನ ತಂದೆ ವಸುದೇವನಿಗೆ 3 ಜನ ತಂಗಿಯರು, ಅವರೇ ಕುಂತಿ, ಶ್ರುತಶ್ರವೆ, ಶ್ರುತಕೀರ್ತಿ. ಕುಂತಿಯನ್ನು ಪಾಂಡುವಿಗೂ, ಶ್ರುತಕೀರ್ತಿಯನ್ನು ಕೇಕಯ ದೇಶದ ರಾಜ ದೃಷ್ಟಕೇತುವಿಗೂ, ಶ್ರುತಶ್ರವೆಯನ್ನು ದಮಘೋಷನಿಗೂ ಮದುವೆ ಮಾಡಿ ಕೊಡಲಾಗುತ್ತದೆ. ಇವರ ಮಗನೇ ಶಿಶುಪಾಲ.) 

{ ಶಿಶುಪಾಲ : ಕೃಷ್ಣನ ಅತ್ತೆಯ ಮಗ.  ಈತ ಜನಿಸಿದಾಗ  ಇವನಿಗೆ ಅನೇಕ ತಲೆಗಳು, ಅನೇಕ ಬಾಹುಗಳು ವಿಕಾರ ಸ್ವರೂಪವೂ ಇರುತ್ತದೆ. ಈ ಬಗ್ಗೆ ಶಿಶುಪಾಲನ ತಾಯಿ ದೇವರಲ್ಲಿ ಮೊರೆ ಹೊಕ್ಕಾಗ ಯಾರ ಮಡಿಲಲ್ಲಿ ಮಲಗಿದಾಗ ಈ ಮಗುವಿಗೆ ಸುರೂಪ ಬರುತ್ತದೋ ಅವನೇ ಇದರ ಮೃತ್ಯು ಎಂದು ಹೇಳಲಾಗುತ್ತದೆ. ಅದರಂತೆ ಕೃಷ್ಣನ ಮಡಿಲಲ್ಲಿ ಮಲಗಿಸಿದಾಗ ಶಿಶುಪಾಲನಿಗೆ ಸುರೂಪ ಬರುತ್ತದೆ. ಈ ಮಗುವನ್ನು ಕೊಲ್ಲದಂತೆ ಶಿಶುಪಾಲನ ತಾಯಿ ಕೃಷ್ಣನನ್ನು ಬೇಡಿಕೊಂಡಾಗಾ ಶ್ರೀಕೃಷ್ಣ ಈತನ 100 ತಪ್ಪುಗಳನ್ನು ಮನ್ನಿಸುವುದಾಗಿಯೂ ತದನಂತರ ಕೊಲ್ಲುವುದಾಗಿಯೂ ತಿಳಿಸುತ್ತಾನೆ. ಅದರಂತೆ ಶಿಶುಪಾಲನೂ ಕೊನೆಯಲ್ಲಿ ಹತನಾಗುತ್ತಾನೆ. ಕೆಲವೊಮ್ಮೆ "ವರವೂ ವಿಕೃತವಾಗಬಹುದು, ಶಾಪವೂ ಅನುಗ್ರಹವಾಗಬಹುದು" ಅದು ವ್ಯಕ್ತಿಯ ನಡತೆಯನ್ನು ಅವಲಂಭಿಸಿದೆ ಎನ್ನುವುದಕ್ಕೆ ಶಿಶುಪಾಲ ಒಂದ ಒಳ್ಳೆಯ ಉದಾಹರಣೆ. }

2. ಜಾಂಬವತಿ - ಈಕೆ ಜಾಂಬವನ ಮಗಳು. "ಸ್ಯಮಂತಕ ಮಣಿ" ಅಪಹರಣವಾದಾಗ ಅದರ ಅಪವಾದ ಕೃಷ್ಣನ ಮೇಲೆ ಬರುತ್ತದೆ. ಇದನ್ನು ಹುಡುಕಿ ತರುವ ಸಂದರ್ಭದಲ್ಲಿ ಈ ವಿವಾಹ ನಡೆಯುತ್ತದೆ.

3. ಭಾಮೆ : ಈಕೆ ಕ್ಷತ್ರಿಯ ಪುರುಷ, ವೃಷ್ಣಿ ವಂಶಸ್ಥ ಮಹಾ ಜಿಪುಣ ಸತ್ರಾಜಿತನ ಒಬ್ಬಳೇ ಮಗಳು.

4. ಕಾಳಿಂದಿ : ಸೂರ್ಯ ಪುತ್ರಿ, ಜನ್ಮಾಂತರದಲ್ಲಿ ಆಕೆ ಯಮನ ಸೋದರಿ.

5. ಮಿತ್ರವಿಂದೆ : ಆವಂತೀ ರಾಜ ಜಯಸೇನನ ಮಗಳು.

6. ನಾಗನಜಿತೀ :

ಕೃಷ್ಣ ಬಳಸುತ್ತಿದ್ದ ಆಯುಧಗಳು :

1. ಸುದರ್ಶನ ಚಕ್ರ
2. ಗದೆ- ಕೌಮೋದಕಿ
3. ಧನಸ್ಸು-ಶಾಙ್ಞ
4. ಕತ್ತಿ- ನಂದಕ
( 5. ಶಂಖ - ಪಾಂಚಜನ್ಯ )

ಕೃಷ್ಣನ ಮಕ್ಕಳು :

1. ಪ್ರದ್ಯುಮ್ನ ಹಾಗೂ ಚಾರುಮತಿ(ರುಕ್ಮಿಣಿ ಮಕ್ಕಳು)
2. ಸಾಂಬ (ಜಾಂಬವತಿ ಮಗ) . ಇದಲ್ಲದೇ ಬೇರೆ ಹೆಂಡತಿಯರಿಂದಲೂ ಹೆಣ್ಣುಮಕ್ಕಳಿದ್ದರು.

ಕೃಷ್ಣನ ಗುರುಗಳು ಸಾಂದೀಪನಿ ಋಷಿಗಳು.
ಕೃಷ್ಣನ ಪರಮಾಪ್ತ ಸ್ನೇಹಿತ ಸುಧಾಮ.

ಮಹಾಭಾರತ ಕುರುಕ್ಷೇತ್ರ ಯುದ್ದ :



ಪಾಂಡವರ ಕಡೆ: ಅರ್ಜುನ, ಭೀಮ, ದೃಷ್ಟಧ್ಯುಮ್ನ, ಅಭಿಮನ್ಯು, ಘಟೋದ್ಗಜ, ಶಿಖಂಡಿ, ಸಾತ್ಯಕಿ ಮುಂತಾದವರು
ಕೌರವರ ಕಡೆ: ಭೀಷ್ಮ, ದ್ರೋಣ, ಕರ್ಣ, ಶಲ್ಯ, ಕೃಪಾಚಾರ್ಯ, ಅಶ್ವತ್ಥಾಮ, ದುರ್ಯೋಧನ  ಮುಂತಾದವರು

ಸೈನ್ಯದ ವಿವರಗಳು :

ಕೌರವ ಸೈನ್ಯ : 11 ಅಕ್ಷೋಹಿಣಿ
ಪಾಂಡವ ಸೈನ್ಯ : 7 ಅಕ್ಷೋಹಿಣಿ
[ 1 ಅಕ್ಷೋಹಿಣಿ = 218700 ರಥಗಳು, 21,870 ಆನೆಗಳು, 65,610 ಕುದುರೆಗಳು & 1,09,350 ಪದಾತಿ ದಳ ]

ಕೊನೆಗೆ ಮಹಾಭಾರತದ 18 ದಿನದ ಕುರುಕ್ಷೇತ್ರ ಯುದ್ದದಲ್ಲಿ ಪಾಂಡವರ ಪಕ್ಷವಹಿಸಿ ಕೌರವರನ್ನು , ಧರ್ಮದ್ರೋಹಿಗಳನ್ನೆಲ್ಲ ಸಂಹರಿಸಿ ಈ ಮಹಾವತಾರೀ ಶ್ರೀಕೃಷ್ಣ, ಭೂಮಿಗೆ ನೆಮ್ಮದಿ ತಂದು ತನ್ನ ಹೆಸರನ್ನು ಸಾರ್ಥಕ ಮಾಡಿದ!  ಶ್ರೀ ಕೃಷ್ಣ ನೊಂದ ಸ್ತ್ರೀಯರಿಗೆ ಮರುಗಿದಷ್ಟು, ಅವರ ಮಾನ ಸಂರಕ್ಷಣೆಗಾಗಿ ಶ್ರಮಿಸಿದಕ್ಕೆ ನಿದರ್ಶನ ದ್ರೌಪದಿಯ ವಸ್ತ್ರಾಪಹರಣದ ಸಂದರ್ಭದಲ್ಲಿ ಕಾಣಬಹುದು.ಶ್ರೀ ಕೃಷ್ಣ ಬುದ್ದಿವಂತರ ಬುದ್ದಿ, ಸೌಂದರ್ಯವಂತರ ಸೌಂದರ್ಯ,  ಜ್ಞಾನಿಗಳ ಜ್ಞಾನ. ಈ ಮುಗಿಯದ ಅನಂತ ವೈಭವದ ಈ ಅವತಾರಿಗೆ ಅನಂತ ಪ್ರಣಾಮಗಳು. 



: ಸ್ಪಂದನಾ



ಲೇಖಕರ ಸಂಪರ್ಕ ವಿಳಾಸ : spandanask@gmail.com
.

2 comments:

Unknown said...

ಕೃಷ್ಣ ಜನ್ಮಾಷ್ಟಮಿ ವಿಶೇಷವಾಗಿ ಶ್ರೀ ಕೃಷ್ಣನ ಬಗ್ಗೆ ನಿಮ್ಮ ಲೇಖನ ಅತ್ಯಂತ ಸೂಕ್ತವೆನಿಸಿದೆ.ಶ್ರೀ ಕೃಷ್ಣನ ಸಂಪೂರ್ಣ ವಿವರ ಈ ಲೇಖನದಲ್ಲಿ ಲಭ್ಯವಿದೆ.ಹೀಗೆ ನಿಮ್ಮ ಲೇಖನಗಳು ಮೂಡಿ ಬರುತ್ತಿರಲಿ.MBM.

pavan katti said...

ಶ್ರೀ ಕೃಷ್ಣಾಷ್ಟಮಿಯಂದು ಬರೆಯಲ್ಪಟ್ಟ ಈ ಲೇಖನ ಸಮಂಜಸವಾಗಿದೆ. ರಾಮಾಯಣ, ಮಹಾಭಾರತದ ಕಥೆಗಳನ್ನು ಪ್ರತಿಯೊಬ್ಬ ಪ್ರಜೆಯು ಅವಶ್ಯವಾಗಿ ಓದಬೇಕು. ಸನ್ಮಾರ್ಗದಲ್ಲಿ ಜೀವನ ಸಾಗಿಸಲು ಪ್ರೇರಕವಾದ ಅಂಶಗಳು ಅವುಗಳಲ್ಲಿ ಅಡಕವಾಗಿವೆ. ರಾಮಾಯಣ, ಮಹಾಭಾರತದ ಕಥೆಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸುವುದು ತೀರ ವಿರಳ. ಸಹಜವಾಗಿ ನಮ್ಮ ದೇಶದ ಜನರಲ್ಲಿ ನೈತಿಕ ಮಟ್ಟ ಕುಸಿದಿದೆ. ನಮ್ಮ ದೇಶ ಭ್ರಷ್ಟಾಚಾರದಲ್ಲಿ 74 ನೇ ಸ್ಥಾನವನ್ನು ಗಳಿಸಿದೆ (2008 ರಲ್ಲಿ). ಈ ಕಥೆಗಳ ಶ್ರವಣದಿಂದ ಶಿಷ್ಟರ ಹುಟ್ಟು ಸಾಧ್ಯ ಎಂಬುದು ನನ್ನ ಅನಿಸಿಕೆ.

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ