ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Sep 7, 2010

ಗುರು-ಶಿಷ್ಯರ ಅಪೂರ್ವ ಸಂಬಂಧ




"ಗುರುಬ್ರಹ್ಮಾ ಗುರುರ್ವಿಷ್ಣು: ಗುರುರ್ದೇವೋ ಮಹೇಶ್ವರ:
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮ:"

ಯಾವುದೇ ವಿದ್ಯೆಯನ್ನು ಗುರುಮುಖೇನ ಕಲಿಯಬೇಕು. ಗುರುವಿಲ್ಲದೆ ಕಲಿಯುವ ಯಾವುದೇ ವಿದ್ಯೆಯೂ ನಿರರ್ಥಕ. (ಏಕಲವ್ಯ ಸಹ ಮಾನಸಿಕವಾಗಿ ದ್ರೋಣಾಚಾರ್ಯರನ್ನು ಗುರುವಾಗಿ ಸ್ವೀಕರಿಸಿದ್ದವನು). ಗುರುವೆಂದರೆ ಶಿಕ್ಷಣವನ್ನು ನೀಡುವವನು ಮಾತ್ರವಲ್ಲ. ಭವದ ಬಂಧನವನ್ನು ನೀಗುವವನು ಎಂದು ಕವಿ ಸರ್ವಜ್ಞ. ಹೇಳುತ್ತಾನೆ.   ಅಲ್ಲದೇ "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂದು ಹೇಳಲಾಗುತ್ತದೆ.  ಪ್ರಪಂಚದಲ್ಲಿ ಶಿಷ್ಯನಾದವನು ಯೋಗ್ಯ ಗುರುವಿಗಾಗಿ ಆಶಿಸುವಂತೆ, ಗುರುವಾದವನೂ ಅರ್ಹ ಶಿಷ್ಯನನ್ನು ಪಡೆಯಲು ಹಂಬಲಿಸುತ್ತಾನೆ. ಗುರುವಿಗೆ ನಾವು ಬಾಗಬೇಕು. ಬಾಗಿ ಮಾಗಬೇಕು, ಮಾಗಿ ಗುರಿಯೆಡೆಗೆ ಸಾಗಬೇಕು.   ಈ ರೀತಿ ಅಪರೂಪದ ಗುರು-ಶಿಷ್ಯರ ಸಂಬಂಧಗಳನ್ನು ತಿಳಿಸುವ ಎಷ್ಟೋ ಕಥೆಗಳನ್ನು ಮಹಾಭಾರತದಲ್ಲಿ ಕಾಣಬಹುದು. ಇಂಥವುಗಳಲ್ಲಿ ನಾನೀಗ  ಗುರು ಧೌಮ್ಯ  ಹಾಗೂ ಶಿಷ್ಯ ಉದ್ದಾಲಕ ಇವರ ಕುರಿತಾಗಿರುವ ಒಂದು ಕತೆಯನ್ನ ಹೇಳಬಯಸುತ್ತೇನೆ.

ಉದ್ದಾಲಕ!  ಇದು ಅವನ ಹೆಸರಲ್ಲ. ಅವನ ಹೆಸರು ಆರುಣಿ. ದೇಶ ಪಾಂಚಾಲ.  ಇವನ ಗುರುಗಳೇ ಆಯೋಧ ಧೌಮ್ಯ. ಗುರುಗಳು ಕಾಲಲ್ಲಿ ತೋರಿಸಿದ್ದನ್ನು ಶಿಷ್ಯನು ತಲೆಯಲ್ಲಿ ಹೊತ್ತು ಮಾಡುತ್ತಿದ್ದ. ಆರುಣಿ ಜ್ಙಾನಕ್ಕಾಗಿ ಹಾತೊರೆದು, ಸುಖ-ದು:ಖಗಳನ್ನೇ ತೊರೆದು ಗುರುಗಳನ್ನು ಶರಣು ಹೊಂದಿದ್ದ. ಶಿಷ್ಯರಿಗೆ ಮೊದಲು ಕಾಲು ಮೂಡಬೇಕು. ತಲೆ ಮೂಡುವುದು ನಂತರ. ಗುರುವಿನಿಂದ ಪಡೆದ ಹುಟ್ಟಿನಲ್ಲಿ  ಮೊದಲು ಕಾಲು, ನಂತರ ತಲೆ ಮೊಳೆಯುತ್ತದೆ. "ಆಚಾರ್ಯ ಪೂರ್ವ ರೂಪಂ. ಅಂತೇವಾಸ್ಯುತ್ತರ ರೂಪಂ." ಎಂದು ಹೇಳಲಾಗುತ್ತದೆ.



ಹೀಗೆ ಧೌಮ್ಯ ಗುರುಗಳೊಮ್ಮೆ ಆರುಣಿಯನ್ನು ಕರೆದು ಹೀಗೆ ಹೇಳುತ್ತಾರೆ. " ಮಗು, ಗದ್ದೆಯಲ್ಲಿ ನೀರು ನಿಲ್ಲಬೇಕು. ನಿಂತು ಭೂಮಿಯಲ್ಲಿ ಇಂಗಬೇಕು. ಆದರೆ ಗದ್ದೆಯ ಅಡ್ಡಗಟ್ಟಿಯಂತಿರುವ ಬದು ಒಡೆದುಹೋಗಿ ನೀರು ಹೊರಬರುತ್ತಿದೆ. ಅದನ್ನು ತಡೆ" ಎಂದು. ಗುರುಗಳ ಮಾತನ್ನು ತಲೆಯಲ್ಲಿ ಹೊತ್ತ ಆರುಣಿ, ಸೋರುತ್ತಿದ್ದ ಬದುವನ್ನು ಅಡ್ಡಗಟ್ಟಲು ಮಣ್ಣು ಕಲ್ಲುಗಳನ್ನು ಜೋಡಿಸಿದರೂ ಕಡಿಮೆಯಾಗದಿದ್ದಾಗ ಸ್ವತ: ತಾನೇ ಅಡ್ಡ ಮಲಗಿ ರಾತ್ರಿಯಿಡೀ ಅಲ್ಲೇ ಮಲಗುತ್ತಾನೆ.  ನಂತರ ಮರುದಿನ ಧೌಮ್ಯ ಗುರುಗಳು  ಇದನ್ನು ಗಮನಿಸಿದಾಗ  ಅವರಿಗೆ ಪರಮಾಶ್ಚರ್ಯವಾಗುತ್ತದೆ. ಬದುವಿಗೆ ತನ್ನ ದೇಹವನ್ನೇ ಮಣ್ಣಾಗಿ ಭಾವಿಸಿದ ಆರುಣಿಯ ಗುರುಭಕ್ತಿಯನ್ನು ಮೆಚ್ಚಿ,  ಅವನಿಗೆ ಉದ್ದಾಲಕ ನಾಗು ಎಂದು ಆಶೀರ್ವದಿಸುತ್ತಾರೆ. [ಅಧ್ಯಾಯ 3, ಆದಿಪರ್ವ]


"ನಾತಪಸ್ಕಾಯ, ನ ಚ  ಅಶುಶ್ರೋಷವೇ ನಾಶ್ರದ್ದದಾನಾಯ ನಾಪ್ರವಕ್ತ್ರೇಭ್ಯೋ ಬ್ರೂಯಾತ್ "  ಅಂದರೆ ತಪಸ್ಸಿಲ್ಲದವನಿಗೆ, ಗುರುಗಳಿಗೆ ಸೇವೆ ಮಾಡದವನಿಗೆ, ಶ್ರದ್ದೆಯಿಲ್ಲದವನಿಗೆ ಹಾಗೂ ತಾನು ತಿಳಿದುದನ್ನು ಇನ್ನೊಬ್ಬರಿಗೆ ಹೇಳುವ ಶಕ್ತಿಯಿಲ್ಲದವನಿಗೆ ಗುರೂಪದೇಶವು ಸಲ್ಲದು ಎಂದು ಹೇಳಲಾಗುತ್ತದೆ.

ಇಂದು ಗುರು ಶಿಕ್ಷಕನಾಗಿದ್ದಾನೆ. ಶಿಷ್ಯ ವಿದ್ಯಾರ್ಥಿಯಾಗಿದ್ದಾನೆ.  ಶಿಕ್ಷಣವೆನ್ನುವುದು ವ್ಯಾಪಾರವಾಗಿದೆ. ಕೆಲವು ಶಿಕ್ಷಕರು ತಮ್ಮ ಸ್ಥಾನಕ್ಕೆ ತಕ್ಕಂತೆ ಗೌರವಯುತವಾಗಿ ನಡೆದುಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವೆಸಗುತ್ತಾರೆ. ಮುಂತಾದ ಹಲವು ಆರೋಪಗಳೊಂದಿಗೆ ಶಿಕ್ಷಕನೆನ್ನುವ ಶಿಷ್ಯೋದ್ಧಾರಕನನ್ನು ನಾವಿಂದು ಕಟಕಟೆಯಲ್ಲಿ ನಿಲ್ಲಿಸಿದ್ದೇವೆ. ಶಿಕ್ಷಕ ನ ಸ್ಥಾನದಲ್ಲಿರುವವನು ತನ್ನ ಶಿಷ್ಯರಿಗಷ್ಟೇ ಅಲ್ಲ, ತನ್ನ ಆದರ್ಶದ ನಡತೆಯಿಂದ ಇಡೀ ಸಮಾಜಕ್ಕೇ ಗುರುವಾಗುತ್ತಾನೆ. ಆಗಬೇಕು ಕೂಡ. ಒಬ್ಬ ಗುರುವಿನ ಕರ್ತವ್ಯ, ಬುದ್ದಿವಂತ ವಿದ್ಯಾರ್ಥಿಗಳನ್ನು ರೂಪಿಸುವುದಷ್ಟೇ ಅಲ್ಲ. ಅವರನ್ನು ಪ್ರಜ್ಞಾವಂತ, ಸುಸಂಸ್ಕೃತ ನಾಗರಿಕರನ್ನಾಗಿ ರೂಪುಗೊಳಿಸುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ನಿರ್ಮಿಸುವ ಜವಾಬ್ದಾರಿ ಇದೆ. ಏಕೆಂದರೆ ಮುಂದೆ ಸಮೃದ್ದ ಸಮಾಜವೊಂದರ ನಿರ್ಮಾತೃಗಳಾಗಲಿರುವವರು ಈ ವಿದ್ಯಾರ್ಥಿಗಳೇ.  

ಹಾಗೆಯೇ ವಿನಮ್ರತೆಯನ್ನು ಝಾಡಿಸಿಕೊಂಡಿರುವ, ದುಡ್ಡು ಮತ್ತು ಹೆತ್ತವರ ಅಧಿಕಾರದ ಬಲದಿಂದ ವಿದ್ಯಾಕೇಂದ್ರಗಳಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತಿರುವ, ಶಿಕ್ಷಕರೆಂದರೆ ಕೇವಲ ಅಂಕಗಳು ಎಂದು ಭಾವಿಸಿರುವ ಶಿಷ್ಯವರ್ಗಕ್ಕೂ "ಶಿಷ್ಯನಾದವರು ಹೇಗಿರಬೇಕು?" ಎಂದು ತಮ್ಮನ್ನು ಕೇಳಿಕೊಳ್ಳುವ ಅಗತ್ಯವಿದೆ.  ಪೋಷಕರು, ಸಮಾಜ, ಸರ್ಕಾರ, ಕಾನೂನುಗಳು ಕೂಡ ತಮ್ಮ ಹೊಣೆಗಾರಿಕೆಯನ್ನು ಅರಿತು ನಡೆಯಬೇಕಿದೆ.



: ಸ್ಪಂದನಾ





.

3 comments:

Unknown said...

ಮೊದಲನೆಯದಾಗಿ ನಿಮ್ಮ ಸಕ್ರಿಯ ಭಾಗವಹಿಸುವಿಕೆಗೆ ಧನ್ಯವಾದಗಳು.ಈ ಒಂದು ಲೇಖನದಲ್ಲಿ ಗುರುವಿನ ಮಹತ್ವವನ್ನು ಒಂದು ಮಹಾಭಾರತದ ಕಥೆಯ ಮೂಲಕ ತುಂಬಾ ಮನೋಜ್ಞವಾಗಿ ಹೇಳಿದ್ದೀರಿ.ಹಾಗೆಯೇ ಅಂದಿನ ಕಾಲದ ಗುರುಶಿಷ್ಯರ ಸಂಬಂಧವನ್ನು ಈಗಿನ ಕಾಲದ ಗುರು ಶಿಷ್ಯರ ಸಂಬಂಧಗಳ ಹೋಲಿಕೆ ಸಮಂಜಸವಾಗಿದೆ ಎಂಬುದು ನನ್ನ ಅನಿಸಿಕೆ.MBM.

Anamika said...

ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಔಚಿತ್ಯಪೂರ್ಣ ಲೇಖನ..

ಆದರೆ,

ಕಥೆಯ ನೀತಿಯನ್ನ ಹೇಳುವಾಗ ವಿವರಿಸುವ ಅಗತ್ಯವಿತ್ತು ಅನಿಸುತ್ತದೆ.ಆದರೆ ಗುರು-ಶಿಷ್ಯ ಸಂಬಂಧದಲ್ಲಿ ಹಿಂದೆ ಇದ್ದ ನೈತಿಕತೆ ಮತ್ತು ಇಂದು ಮುಟ್ಟಿರುವ ಅಧೋಗತಿಯ ಚಿತ್ರವನ್ನ ಇನ್ನಷ್ಟು ಮನಮುಟ್ಟುವಂತೆ ವಿವರಿಸುವ ಅಗತ್ಯವಿತ್ತು ಅನಿಸುತ್ತದೆ.

ಮುಂಬರುವ ಲೇಖನಗಳಲ್ಲಿ ಸದರಿ ಅಂಶಗಳನ್ನ ರೂಢಿಸಿಕೊಳ್ಳುತ್ತೀರಿ ಎಂದು ನಂಬಿದ್ದೇನೆ.

- ಅನಾಮಿಕ

ಪರಶು.., said...

ಶಿಕ್ಷಕರ ದಿನದ ಆಚರಣೆಯ ಈ ಸಂದರ್ಭದಲ್ಲಿ ನಿಮ್ಮ ಈ ಲೇಖನ ತುಂಬಾ ಅರ್ಥಪೂರ್ಣವಾಗಿದೆ. ಹೀಗೇ ಸಂದರ್ಭಾನುಸಾರ ನಿಮ್ಮ ಲೇಖನಗಳು ಮೂಡಿ ಬರಲಿ...

'ವರ್ಣ ಮಾತ್ರಂ ಕಲಿಸಿದಾತಂ ಗುರು' ಎಂಬ ಪರಿಕಲ್ಪನೆಯಿದ್ದ ನಮ್ಮ ಸಮಾಜದಲ್ಲಿ ಇತ್ತೀಚಿನ ಉ.ಖಾ.ಜಾ ನೀತಿಗಳ ಪರಿಣಾಮದಿಂದಾಗಿ ಶಿಕ್ಷಣ ಎಂಬುದು ಸಂಪೂರ್ಣ ವಾಣಿಜ್ಜೀಕರಣಗೊಂಡಿದೆ. 'ಗುರು' ಎಂದರೆ ಕೇವಲ ಪ್ರಾಥಮಿಕ ಶಿಕ್ಷಣವನ್ನು ಕಲಿಸಿದವರು ಮಾತ್ರ ಎಂಬ ಮನೋಭೂಮಿಕೆ ಬೆಳೆಯುತ್ತಿದೆ. ಗುರುವೆಂದರೆ ನಮಗೆ ತಕ್ಷಣ ನೆನಪಾಗುವುದು ಎಳವೆಯಲ್ಲಿ ಅಕ್ಷರ ತಿದ್ದಿಸಿದ ಉಪಾಧ್ಯಾಯರೇ ಹೊರತು, ಕಾಲೇಜಿನಲ್ಲಿ ಉನ್ನತ ಜ್ಞಾನ ನೀಡಿದ ಉಪನ್ಯಾಸಕರಲ್ಲ. ಗುರು-ಶಿಷ್ಯ ಪರಂಪರೆಯ ನಂಟು ಕಳಚಿರುವ ಸ್ಪಷ್ಟಸುಳಿವು ನಮಗಿಲ್ಲಿ ಕಾಣುತ್ತಿದೆ. ಇಂದು ಧೌಮ್ಯರಂತಹ ಗುರುವು ಸಿಗಬಹುದೇನೋ ಆದರೆ ಉದ್ಧಾಲಕ ನಂತಹ ಶಿಷ್ಯರು ಸಿಗಲಾರರು.! ಇಂದು ಉತ್ತಮ ಶಿಷ್ಯನಾಗುವ ಅರ್ಹತೆ ಇರದವನು, ಮುಂದೆ ಉತ್ತಮ ಗುರುವಾಗಲಾರ.!! ಮುಂದೆ ಕೆಲವು ದಶಕಗಳನಂತರ ಗುರುವು ನೆಪಮಾತ್ರವಾಗಿ 'ತನಗೆ ತಾನೇ ಗುರು' ಎಂಬ ಪರಿಕಲ್ಪನೆ ಬೆಳೆದರೂ ಆಶ್ಚರ್ಯವಿಲ್ಲ. ಅಲ್ಲವೇ..?

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ