ನಮ್ಮ ಶರೀರ ನಮಗೆಷ್ಟು ಗೊತ್ತು ?
1) ನಮ್ಮ ತಲೆಯಲ್ಲಿರುವ ಕೂದಲುಗಳ ಸಂಖ್ಯೆ ಒಂದು ಲಕ್ಷಕ್ಕೂ ಅಧಿಕ. ಪ್ರತಿ ಕೂದಲುಗಳೂ ಮೂರು ವರ್ಷಕ್ಕಿಂತ ಅಧಿಕ ಬೆಳೆಯುತ್ತದೆ. ಅದರ ವೇಗ ಮೂರು ದಿನಗಳಿಗೆ ಒಂದು ಮಿ.ಮೀ. ಅಂದರೆ ವರ್ಷಕ್ಕೆ ಸುಮಾರು ಐದು ಇಂಚು ಉದ್ದ ಬೆಳೆಯುತ್ತದೆ.
2) ನಮ್ಮ ಇಡೀ ದೇಹದಲ್ಲಿರುವ ಕೂದಲುಗಳ ಸಂಖ್ಯೆ ಸುಮಾರು 50 ಲಕ್ಷ.
3) ನಮ್ಮ ಹೃದಯದ ತೂಕ ಕೇವಲ 250 ಗ್ರಾಂ.
4) ನಮ್ಮ ಚರ್ಮದಲ್ಲಿನ ಮೆಲನಿನ್ ಕಣಗಳ ಉತ್ಪತ್ತಿ ಕಡಿಮೆ ಆದರೆ ಚರ್ಮ ಬಿಳುಪಾಗಿಯೂ ಹೆಚ್ಚಿದ್ದರೆ ಚರ್ಮ ಕಪ್ಪಾಗಿಯೂ ಆಗುತ್ತದೆ.
5) ನಮ್ಮ ದೇಹದ ಶೇ.60 ರಷ್ಟು ಭಾಗ ನೀರಿನಿಂದ ಆವೃತ್ತವಾಗಿದ್ದು ಉಳಿದದ್ದು ಮೂಳೆ, ಮಾಂಸ ಖಂಡಗಳು ಇತ್ಯಾದಿ.
6) ನಮ್ಮ ಚರ್ಮದಲ್ಲಿ ಕೆರಾಟಿನ್ ಎಂಬ ನೀರು ನಿರೋಧಕ ವಸ್ತು ಇದ್ದು ಅದು ನೀರನ್ನು ತಾತ್ಕಾಲಿಕವಾಗಿ ಚರ್ಮದೊಳಗೆ ಬರುವುದನ್ನು ತಡೆ ಹಿಡಿಯುತ್ತದೆ. ಅದಕ್ಕಾಗಿ ಮಳೆಯಲ್ಲಿ ನೆನೆದರೂ ಚರ್ಮ ನೆನೆಯುವುದಿಲ್ಲ. ಆದರೆ, ಸ್ನಾನ ಮಾಡಿದಾಗ ಅಥವಾ ಈಜುತ್ತಿದ್ದಾಗ ಶೇ.4ರಷ್ಟು ನೀರು ಕೆರಾಟಿನ್ ಅನ್ನು ಛೇದಿಸಿ ಒಳ ಸೇರುತ್ತದೆ. ಅದಕ್ಕಾಗಿಯೇ ಸ್ನಾನದ ನಂತರ ನಮ್ಮ ಕೈಬೆರಳುಗಳ ಚರ್ಮವು ಸ್ವಲ್ಪ ಮಟ್ಟಿಗೆ ಸುಕ್ಕುಗಟ್ಟಿರುತ್ತದೆ.
7) ಹೃದಯದ ಪ್ರತಿ ಬಡಿತಕ್ಕೆ ರಕ್ತವು ಚಿಮ್ಮಿ ಇಡೀ ದೇಹದುದ್ದಕ್ಕೂ ಹರಿಯುತ್ತದೆ. ಪ್ರತಿದಿನ ಹೃದಯವು ಈ ರೀತಿ 9000 ಲೀಟರ್ ರಕ್ತವನ್ನು ಪಂಪ್ ಮಾಡುತ್ತದೆ.
8) ಗೊರಿಲ್ಲಾದ ದೇಹ ಮಾನವನ ದೇಹಕ್ಕಿಂತ ದೊಡ್ಡದಿದೆ. ಆದರೆ ಅದರ ಮೆದುಳು 0.45 ಕೆ.ಜಿ. ತೂಕವಿದ್ದರೆ ಮಾನವನ ಮೆದುಳಿನ ತೂಕ 1.40 ಕೆ.ಜಿ. ಅದಕ್ಕೆ ನಮಗೆ ಬುದ್ದಿ ಜಾಸ್ತಿ !!!!!!!
9) ನಮ್ಮ ರಕ್ತದಲ್ಲಿರುವ ಕೊಳೆಯನ್ನು ಸೋಸಲು ಮೂತ್ರ ಪಿಂಡಗಳಲ್ಲಿ 10,00,000 ಆಲಿಕೆಗಳಿವೆ. ನೆಪ್ರೋನ್ ಎಂಬ ಹೆಸರಿನ ಇವುಗಳನ್ನು ಒಂದರ ಪಕ್ಕ ಒಂದರಂತೆ ಜೋಡಿಸಿದರೆ ಸುಮಾರು 80 ಕಿ.ಮೀ. ಉದ್ದವಾಗುತ್ತದೆ.
10) ನಮ್ಮ ಶರೀರದಲ್ಲಿ ಗಾಯವಾದಾಗ ರಕ್ತವು ನೀರು ಹರಿದಂತೆ ನಿರಂತರವಾಗಿ ಹರಿಯುವುದಿಲ್ಲ. ಬದಲಾಗಿ ಹೆಪ್ಪುಗಟ್ಟುತ್ತದೆ. ಇದಕ್ಕೆ ಕಾರಣ ರಕ್ತದಲ್ಲಿನ ಪ್ರೊಥ್ರೋಂಬಿನ್ ಎಂಬ ರಕ್ತದ ಕಣ. ಇದು ಗಾಳಿಗೆ ಸೋಕಿದೊಡನೆ ಬಲೆಯ ರೂಪ ತಾಳಿ ರಕ್ತ ಹರಿಯುವುದನ್ನು ತಡೆಯುತ್ತದೆ. ಇದನ್ನು ಯಕೃತ್ ಉತ್ಪಾದಿಸುತ್ತದೆ. ಆದ್ದರಿಂದ, ಯಕೃತ್ ಗೆ ಹಾನಿಯಾದರೆ ರಕ್ತ ಹೆಪ್ಪುಗಟ್ಟುವಿಕೆ ನಿಲ್ಲುತ್ತದೆ.
11) ಉಗುರು ಒಂದು ನಿರ್ಜೀವ ಪ್ರೋಟೀನ್ ವಸ್ತು. ಇದು ಸತ್ತ ಜೀವಕೋಶಗಳಿಂದ ಉಂಟಾದುದು. ಅದಕ್ಕಾಗಿ ಇದನ್ನು ಕತ್ತರಿಸಿದರೂ ನೋವಿನ ಅನುಭವವಾಗುವುದಿಲ್ಲ.
12) ಹುಟ್ಟಿನಿಂದ ಸಾಯುವವರೆಗೂ ಯಾವುದೇ ವ್ಯಕ್ತಿಯ ಕೈಬೆರಳುಗಳ ಗುರುತುಗಳು ಬದಲಾಗುವುದಿಲ್ಲ ಮತ್ತು ಪ್ರತಿ ವ್ಯಕ್ತಿಯ ಬೆರಳುಗಳು ವಿಶಿಷ್ಟವಾಗಿದ್ದು ಬೇರೆಯವರ ಗುರುತುಗಳಿಂದ ಪ್ರತ್ಯೇಕವಾಗಿರುತ್ತದೆ. ಅವಳಿ-ಜವಳಿಗಳಾಗಿ ಹುಟ್ಟಿದರೂ ಕೈಬೆರಳಿನ ಗುರುತುಗಳು ಬೇರೆ ಬೇರೆಯಾಗಿರುತ್ತದೆ. ಇದನ್ನು ಕಂಡು ಹಿಡಿದವರು ಸರ್ ಎಡ್ವರ್ಡ್ ಹೆನ್ರಿ.
13) ಸಸ್ಯಗಳನ್ನೂ ಒಳಗೊಂಡಂತೆ ಎಲ್ಲಾ ಪ್ರಾಣಿಗಳಿಗೂ ನಿದ್ರೆ ಅತ್ಯಾವಶ್ಯಕ. ಶಾರೀರಿಕ ಹಾಗೂ ಮಾನಸಿಕ ಬಳಲಿಕೆಯಿಂದ ಬಿಡುಗಡೆ ಹೊಂದುವುದು ನಿದ್ರೆಯಾಗಿದೆ. ನಿದ್ರೆಯಲ್ಲಿದ್ದಾಗ ನಮ್ಮ ಉಸಿರಾಟ ನಿಧಾನವಾಗಿ ಹೃದಯದ ಬಡಿತ ಮಂದವಾಗುತ್ತದೆ. ಆಗ ನಮ್ಮ ಶಾರೀರಿಕ ಚಟುವಟಿಕೆಗಳು ಬದಲಾಗುತ್ತದೆ. ಇದನ್ನು ನಿಯಂತ್ರಣದಲ್ಲಿಡುವುದು ಹೈಪಾಥಲಾಮಸ್ ಎಂಬ ಮೆದುಳಿನ ಭಾಗ.
- ಎಂ.ಬಿ.ಲಾವಣ್ಯ
.
No comments:
Post a Comment