ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Showing posts with label ಸುದ್ದಿಯಲ್ಲಿರುವ ಸ್ಥಳ ನಕ್ಷೆ. Show all posts
Showing posts with label ಸುದ್ದಿಯಲ್ಲಿರುವ ಸ್ಥಳ ನಕ್ಷೆ. Show all posts

Dec 24, 2010

ಜಪಾನ್ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 19

0 ಪ್ರತಿಕ್ರಿಯೆಗಳು
ಸುದ್ದಿ : 92.4 ಟ್ರಿಲಿಯನ್ ಯೆನ್ ಮೊತ್ತದ ಬಜೆಟ್ ಮಂಡಿಸಿದ ಜಪಾನ್ ಸರ್ಕಾರ


ಸುದ್ದಿಯಲ್ಲಿರುವ ಸ್ಥಳ ನಕ್ಷೆ :

ಜಾಗತಿಕ ನಕ್ಷೆಯಲ್ಲಿ ಜಪಾನ್

ಜಪಾನ್ ಸ್ವಾಭಾವಿಕ

ನೆರೆ-ಹೊರೆ




  • ಸೂರ್ಯೋದಯದ ನಾಡು ಎಂದೇ ಪ್ರಸಿದ್ಧವಾಗಿರುವ ಜಪಾನ್ ಗೆ, (ಆ ಹೆಸರಿನ ಅರ್ಥ ಕೂಡ ಅದೇ !!) ಅಧಿಕೃತ ಭಾಷೆಯಲ್ಲಿ ಸ್ಟೇಟ್ ಆಫ್ ಜಪಾನ್ ಎಂದು ಹೆಸರಿದೆ.
  • ಜಪಾನ್ ದೇಶ ದ್ವೀಪಗಳ ಸಮೂಹ. ಇಂತಹ ಭೂಪ್ರದೇಶಗಳನ್ನ Archipelago ಅಂತ ಕರೆಯುತ್ತಾರೆ ಅನ್ನೋದನ್ನ ಸ್ಪರ್ಧಾರ್ಥಿಗಳು ನೆನಪಿಡಬೇಕು. ( Archipelago = Island Group = is a chain or cluster of islands that are formed tectonically ) ಜಪಾನ್ ತನ್ನ ಸುಪರ್ದಿಯಲ್ಲಿ 3000+ ದ್ವೀಪಗಳನ್ನ ಹೊಂದಿದೆ.
  • ಜಪಾನ್ ದೇಶ ಪರ್ವತಮಯವಾಗಿದ್ದು ಬಹಳ ಪರ್ವತಗಳು ತಮ್ಮ ಉದರದಲ್ಲಿ ಜ್ವಾಲಾಮುಖಿಗಳನ್ನ ಹೊಂದಿವೆ.
  • ಚೀನಾ ದೇಶವನ್ನ ಆರ್ಥಿಕತೆಯಲ್ಲಿ ಹಿಂದಿಕ್ಕಲು ಪ್ರಯತ್ನಿಸುತ್ತಿರುವ ಜಪಾನ್, ಜನಸಂಖ್ಯೆಯಲ್ಲೂ ತೀರ ಹಿಂದೇನಿಲ್ಲ. ಜಗತ್ತಿನ ಜನಸಂಖ್ಯೆಯಲ್ಲಿ 10ನೇ ಸ್ಥಾನ ಹೊಂದಿದೆ. ದೇಶದ ವಿಸ್ತೀರ್ಣ ಚಿಕ್ಕದಿದ್ದರೇನಾಯಿತು !! ನಾವು ಎಲ್ಲದರಲ್ಲೂ ಮುಂದಿರಬೇಕು ಎನ್ನುವ ಹಂಬಲ !!! ನಮ್ಮ ದೇಶದಲ್ಲಿ ಜಾಗ ಇಲ್ಲದಿದ್ದರೇನಾಯಿತು, ಬೇರೆ ದೇಶದಲ್ಲಿ ಹೋಗಿ ನೆಲೆಸಿದರಾಯಿತು ಎನ್ನುವ Idea ಇರಬೇಕು !!!!
  • ದೇಶದಲ್ಲಿ Emperor ಇವತ್ತಿಗೂ ಅತ್ಯುಚ್ಛ ಸ್ಥಾನವನ್ನಲಂಕಿರಿಸಿರುವ ವ್ಯಕ್ತಿ. Diet ಎಂಬ ಹೆಸರಿನ ಜನಪ್ರತಿನಿಧಿಗಳ ಸಭೆ ಕೂಡ ಇದೆ. ನಮ್ಮ ದೇಶದ್ದು ಸಂಸತ್ತು (Parliament) ಅನ್ನೋದು ನಿಮಗೆ ಗೊತ್ತಿದೆ.
  • 1945ರಲ್ಲಿ ಅಣು ಬಾಂಬ್ ಎಂಬ ವಿಕೃತ ಪ್ರತೀಕಾರಕ್ಕೆ ತುತ್ತಾದ ಜಪಾನ್ ಇಂದು ಜಗತ್ತಿನಲ್ಲಿ ಅಮೆರಿಕಾ & ಚೀನಾ ನಂತರ ಮೂರನೇ ಆರ್ಥಿಕ ಶಕ್ತಿಯಾಗಿ ಬದಲಾಗಿದೆ. ಅಂದು ಜಪಾನ್ ದೇಶದಲ್ಲಿ ಇದ್ದ ಅಭದ್ರತೆ ಒಂದು ಕಡೆಯಾದರೆ, ಅದೇ ಹೊತ್ತಿನಲ್ಲಿ ಸ್ವಾತಂತ್ರ್ಯ ಪಡೆದ ಭಾರತ ದೇಶ ಬ್ರಿಟಿಷರ ದೋಚುವಿಕೆಯಿಂದ ಬಡ ದೇಶವಾಗಿದ್ದುದು ನಿಜ. ಆದರೆ ಇವರ ಅಧೀನದ ಚಿಕ್ಕ ಭೂಪ್ರದೇಶದಲ್ಲಿ ಇವರು ತೋರಿರುವ ಅದಮ್ಯ ಸಾಹಸ ಖಂಡಿತ ಇಡೀ ಜಗತ್ತಿಗೆ ಮಾದರಿ. ಹೀಗಿರುವಾಗ ಭಾರತ & ಜಪಾನ್ ಎರಡೂ ದೇಶಗಳು ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸ್ಥಾನ ಗಿಟ್ಟಿಸಲು ತವಕಿಸುತ್ತಿವೆ. ಆ ಸ್ಥಾನಕ್ಕೆ ಪೈಪೋಟಿ ನಡೆಸಲು ಅವರಿಬ್ಬರೂ ತಂತಮ್ಮ ಅರ್ಹತಾ ಪಟ್ಟಿಯನ್ನೂ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಈ ಕೆಳಕಂಡ ಪಟ್ಟಿ ನೋಡಿದ ಮೇಲೆ ಎದೆ ಮೇಲೆ ಕೈ ಇಟ್ಟುಕೊಂಡು ಅರ್ಹತೆಯ ಬಗ್ಗೆ ಮಾತಾಡಲು ಯಾರಿಗೆ 'ಅರ್ಹತೆ' ಇದೆಯೆಂದು ನೀವು ಸ್ಪರ್ಧಾರ್ಥಿಗಳೂ ತೀರ್ಮಾನಿಸಿ :
 

ಭಾರತ
ಜಪಾನ್
ವಿಸ್ತೀರ್ಣ
7ನೇ ಸ್ಥಾನ
61ನೇ ಸ್ಥಾನ
ಜನಸಂಖ್ಯೆ
2ನೇ ಸ್ಥಾನ
10ನೇ ಸ್ಥಾನ
ಸ್ವಂತ ಸಂವಿಧಾನ ಅಂಗೀಕರಿಸಿದ್ದು
1950
1947
GDP (PPP)
$1.367 ಟ್ರಿಲಿಯನ್
$4.267 ಟ್ರಿಲಿಯನ್
HDI
119ನೇ ಸ್ಥಾನ
11ನೇ ಸ್ಥಾನ
ಕರೆನ್ಸಿ
1 ಜಪಾನ್ ಯೆನ್
= 0.5508 ಭಾರತ ರೂಪಾಯಿ
------
81.3 ಜಪಾನ್ ಯೆನ್ = 1 US $
1 ರೂಪಾಯಿ
= 1.8063 ಜಪಾನ್ ಯೆನ್
------
45.02 ರೂಪಾಯಿ = 1 US $
ಅಂದ್ರೆ ಎಂಟಾಣೆ ಕೊಟ್ರೆ ಒಂದು ಜಪಾನಿ ಯೆನ್ ಪಡೆಯಬಹುದು. ಅದೇ ರೀತಿ 45 ರೂಪಾಯಿಗೆ ಒಂದು ಯು,ಎಸ್.ಡಾಲರ್ ಪಡೆದರೆ 81 ಜಪಾನಿ ಯೆನ್ ಗೆ ಒಂದು ಯು,ಎಸ್.ಡಾಲರ್ ಪಡೆಯಬಹುದು.
ಸಾಕ್ಷರತೆ (clik here)
168ನೇ ಸ್ಥಾನ
32ನೇ ಸ್ಥಾನ
ರಫ್ತು ಶಕ್ತಿ
18ನೇ ಸ್ಥಾನ
4ನೇ ಸ್ಥಾನ
ಆಮದು ಶಕ್ತಿ
15ನೇ ಸ್ಥಾನ
5ನೇ ಸ್ಥಾನ
Purchasing Power Parity(PPP)
4ನೇ ಸ್ಥಾನ
3ನೇ ಸ್ಥಾನ
Life Expectency (ಆರೋಗ್ಯ ಸೌಲಭ್ಯಗಳನ್ನಾಧರಿಸಿದೆ)
139ನೇ ಸ್ಥಾನ
(64.7ವರ್ಷಗಳು)
1ನೇ ಸ್ಥಾನ
(82.6 ವರ್ಷಗಳು)
Hunger Index
18ಸ್ಥಾನ
ಪಟ್ಟಿಯಲ್ಲಿ ಬರುವುದೇ ಇಲ್ಲ !!
Poverty Index
HDI ನಲ್ಲಿ 100+ ಸ್ಥಾನ ಹೊಂದಿರುವ ಭಾರತ ಇನ್ನು ಬಹಳ ಪ್ರಯತ್ನ ಪಡಬೇಕು.
HDI ನಲ್ಲಿ 11ನೇ ಸ್ಥಾನ ಪಡೆದಿರುವ ಜಪಾನ್ ಜಗತ್ತಿನಲ್ಲಿ ಬಡತನದ ಪ್ರಮಾಣ ಅತಿ ಕಡಿಮೆ ಇರುವ ದೇಶಗಳ ಪಟ್ಟಿಯಲ್ಲಿ 12ನೇ ಸ್ಥಾನ ಹೊಂದಿದೆ.
ಇಷ್ಟೆಲ್ಲಾ ಬೆಚ್ಚಿ ಬೀಳಿಸುವ ಅಂಕಿಸಂಖ್ಯೆಗಳನ್ನ ಇಟ್ಟುಕೊಂಡಿರುವ ಭಾರತ ತನ್ನ ದೇಶದಲ್ಲಿ ತಾಂಡವವಾಡುತ್ತಿರುವ ಅನಕ್ಷರತೆ-ಭೃಷ್ಟಾಚಾರ-ಹದಗೆಟ್ಟಿರುವ ಆರೋಗ್ಯ ಸೇವೆ ... ಇವನ್ನೆಲ್ಲಾ ಮರೆತು VETO POWER ಗಾಗಿ ಬಡಿದಾಡುವುದು ಎಷ್ಟು ಸಮಂಜಸ !! 

ಪಾಕಿಸ್ತಾನದಂಥ ಪಾಪಿಯ ಜೊತೆಗೂ ನ್ಯಾಯವನ್ನೇ ಮಾತಾಡುವ ಭಾರತ, ಈ ಸ್ಥಾನ ಪಡೆಯಲು ನ್ಯಾಯಯುತವಾಗಿಯೂ ಅರ್ಹವೇ ?!! 

ನಾವು ಭಾರತೀಯರು ಕೂಡ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವುದು ನಿಜವೇ ಇದ್ದರೂ Sustained Development ಮತ್ತು ಬರೀ Development ಗೆ ವ್ಯತ್ಯಾಸವಿದೆ. 

ನಮ್ಮ ದೇಶದಲ್ಲಿ ನೆಲೆಸಿರುವ ಅನಕ್ಷರತೆ ಹೀಗೇ ಮುಂದುವರೆದು ನಾವಲ್ಲಿ ವೀಟೋ ಚಲಾಯಿಸಿದರೆ ನಗುವುದಿಲ್ಲವೇ ಜಗತ್ತಿನ ಜನ ?? 

ಒಬ್ಬ ವಿದ್ಯಾರ್ಥಿ ತನ್ನ ಜಾತಿ ಇದೇ ಎಂದು ದೃಢೀಕರಿಸಿಕೊಳ್ಳುವ ಪ್ರಮಾಣಪತ್ರ ಪಡೆಯಲು ಸಾವಿರ ರೂಪಾಯಿ ಚೆಲ್ಲಲೇ ಬೇಕಿರುವುದನ್ನ ನೋಡಿ ನಗೊಲ್ವಾ ಅವರು?? 

ಅಷ್ಟಕ್ಕೂ ಮಿಗಿಲಾಗಿ ತನ್ನ ತಲೆದೂಗಲೇಬೇಕಾದ ಸಾಮರ್ಥ್ಯಗಳನ್ನ ಮಾತ್ರ ಮುಂದಿಟ್ಟುಕೊಂಡು VETO ಪಡೆಯಲು ಹಂಬಲಿಸುತ್ತಿರುವ ಭಾರತದಲ್ಲಿ ಒಬ್ಬ ವಿದ್ಯಾರ್ಥಿಯ ವೈಯಕ್ತಿಕ ಸಾಮರ್ಥ್ಯ ಮಾತ್ರ ಮಾನದಂಡವಲ್ಲ ; ಅವನ ಜಾತಿ ಕೂಡ ಅವನಿಗೆ ಮಾನದಂಡವಾಗುತ್ತದೆ ಎಂದರೆ ಹಾಸ್ಯಾಸ್ಪದವಲ್ಲವೇ ??



  • ಜಪಾನ್ ದೇಶದ 80 ಪ್ರತಿಶತ ಭೂಭಾಗ ಯಾವುದೇ ಕೃಷಿ, ಕೈಗಾರಿಕಾ ಚಟುವಟಿಕೆಗಳಿಗೆ ಯೋಗ್ಯವಲ್ಲ !!
  • ಇದು ಸಾಲದು ಎಂಬಂತೆ ಮೆದು ನೆಲ & ಭೂಕಂಪದ ಅಭದ್ರತೆ ಸದಾ ಅಲ್ಲಿನ ಜನರಿಗೆ ದುಸ್ವಪ್ನವಾಗಿದೆ.
  • ಇಷ್ಟಿದ್ದರೂ ಅತಿ ಹೆಚ್ಚು ಜನಸಾಂದ್ರತೆ ಇರುವ ದೇಶಗಳ ಪಟ್ಟಿಯಲ್ಲಿ ಜಪಾನ್ ಗೆ 36ನೇ ಸ್ಥಾನವಿದೆ. (ಭಾರತಕ್ಕೆ 32ನೇ ಸ್ಥಾನವಿದೆ.)

: ರವಿ

Dec 23, 2010

ಗ್ರೀಸ್ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 18

0 ಪ್ರತಿಕ್ರಿಯೆಗಳು
ಸುದ್ದಿ : ರಾಷ್ಟ್ರದ ಬಜೆಟ್ ನಲ್ಲಿ ಮಿತವ್ಯಯತೆ(Austerity) ಯನ್ನ ಮಂಡಿಸಿದ ಗ್ರೀಕ್ ಸರ್ಕಾರ


ಸುದ್ದಿಯಲ್ಲಿರುವ ಸ್ಥಳ ನಕ್ಷೆ :

ಜಾಗತಿಕ ನಕ್ಷೆಯಲ್ಲಿ ಗ್ರೀಸ್


ಗ್ರೀಸ್ ಸ್ವಾಭಾವಿಕ

ನೆರೆ-ಹೊರೆ



  • ಗ್ರೀಸ್ ದೇಶಕ್ಕಿರುವ ಇನ್ನೊಂದು ಜನಪ್ರಿಯ ಹೆಸರು ಹೆಲ್ಲಾಸ್(Hellas), ಇದೇ ಕಾರಣಕ್ಕೆ ಈ ದೇಶವನ್ನ Hellenic Republic ಎಂದು ಅಧಿಕೃತ ಭಾಷೆಯಲ್ಲಿ ಹೇಳಲಾಗುತ್ತದೆ.
  • ಅಲ್ಬೇನಿಯಾ. ಮಸಿಡೋನಿಯಾ, ಬಲ್ಗೇರಿಯಾ & ಟರ್ಕಿ ದೇಶಗಳು ಗ್ರೀಸ್ ದೇಶದ ನೆರೆಯವರು.
  • ಪೂರ್ವ, ದಕ್ಷಿಣ & ಪಶ್ಚಿಮಕ್ಕೆ ಸಮುದ್ರತೀರವನ್ನ ಹೊಂದಿರುವ ಗ್ರೀಸ್ ದೇಶ ಜಗತ್ತಿನಲ್ಲಿ 12ನೇ ಅತಿ ಉದ್ದದ ಕರಾವಳಿ ಹೊಂದಿದೆ. ( ಭಾರತ-19 ; ಕೆನಡಾ-1 ; ಇಂಡೋನೇಷಿಯಾ-2 ; ಗ್ರೀನ್ ಲ್ಯಾಂಡ್-3 ; ರಷಿಯಾ-4 ; ಫಿಲಿಪ್ಪೀನ್ಸ್-5 ; ಜಪಾನ್-6 ; ಆಸ್ಸ್ರೇಲಿಯಾ-7 ; ನಾರ್ವೆ-8 ; ಅಮೆರಿಕಾ-9 ; ನ್ಯೂಝಿಲ್ಯಾಂಡ್-10 )
  • ಗ್ರೀಸ್ ದೇಶ ಪರ್ವತಮಯವಾಗಿದ್ದು ದೇಶದ ಭೂಭಾಗದ 80 ಪ್ರತಿಶತ ಭಾಗ ಪರ್ವತಾವೃತವಾಗಿದೆ.
  • ಸದರಿ ದೇಶದ ಅಧಿಪತ್ಯದಡಿಯಲ್ಲಿ ಸುಮಾರು 1400 ದ್ವೀಪಗಳು ಬರುತ್ತವೆ. ಇವುಗಳಲ್ಲಿ 200 ಚಿಲ್ಲರೆ ದ್ವೀಪಗಳಲ್ಲಿ ಮಾತ್ರ ಮನುಷ್ಯರು ವಾಸಿಸುತ್ತಾರೆ.
  • ಜಗತ್ತಿನ ಪಾಶ್ಚಿಮಾತ್ಯ ನಾಗರೀಕತೆಯ ತೊಟ್ಟಿಲು ಎನಿಸಿಕೊಂಡಿರುವುದು ಗ್ರೀಸ್ ನಾಗರೀಕತೆ.
  • ಪ್ರಜಾಪ್ರಭುತ್ವ, ಪಾಶ್ಚಿಮಾತ್ಯ ತತ್ವಶಾಸ್ತ್ರ, ಒಲಿಂಪಿಕ್ ಕ್ರೀಡೆಗಳು, ಪಾಶ್ಚಿಮಾತ್ಯ ಸಾಹಿತ್ಯ, ಸಾರ್ವಜನಿಕ ಆಡಳಿತ ತತ್ವಗಳು, ಪಶ್ಚಿಮದ ನಾಟಕ ಪದ್ಧತಿ... ಇತ್ಯಾದಿಗಳ ಜನ್ಮಸ್ಥಾನ ಗ್ರೀಸ್.
  • ಸದರಿ ಗ್ರೀಸ್ ಭಾರತಕ್ಕಿಂತ ಎಷ್ಟೋ ಪಾಲು ಚಿಕ್ಕದಿದ್ದರೂ ಈಗಾಗಲೇ ಅಭಿವೃದ್ಧಿ ಹೊಂದಿದ ದೇಶವಾಗಿದೆ.
  • ಒಟ್ಟೋಮನ್ ಆಡಳಿತವನ್ನ ಕಿತ್ತೊಗೆದು 1830ರಲ್ಲಿ ಆಧುನಿಕ ಗ್ರೀಕ್ ಸೃಷ್ಟಿಯಾಯಿತು.
  • ಗ್ರೀಸ್ ದೇಶ ಮೊದಲಿನಿಂದ ಯುರೋಪಿಯನ್ ಒಕ್ಕೂಟದ ಭಾಗವಾಗಿದೆ. ಈ ಅಂಶ ಯಾಕೆ ಪ್ರಮುಖ ಅಂದ್ರೆ ಯುರೋಪ್ ಖಂಡದ ಭಾಗವಾಗಿಯೂ ಇಂದಿಗೂ ಯುರೋಪಿಯನ್ ಒಕ್ಕೂಟ ಸೇರದ ಕೆಲವು ದೇಶಗಳಿವೆ ಅದಕ್ಕೆ.
  • ನಮ್ಮ ದೇಶದ ಸಂಸ್ಕೃತಿಯಲ್ಲಿ ಹಿಮಾಲಯಕ್ಕೆ ನೀಡಿರುವಷ್ಟೇ ದೈವಿಕತೆ ಆ ದೇಶದಲ್ಲಿ Mount Olympus ಗೆ ನೀಡಲಾಗಿದೆ.
  • ದೇಶದ ಈಶಾನ್ಯ ಭಾಗಕ್ಕೆ ಅತಿ ಪ್ರಾಚೀನ ಕಗ್ಗಾಡು ವ್ಯಾಪಿಸಿದೆ.

 : ರವಿ

Dec 22, 2010

ಬಾಂಗ್ಲಾದೇಶ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 17

1 ಪ್ರತಿಕ್ರಿಯೆಗಳು
ಸುದ್ದಿ : ಮುಚ್ಚಿಹೋಗಿದ್ದ ಬಾಂಗ್ಲಾದೇಶದ ವಿದೇಶಿ ಕಲ್ಲಿದ್ದಲು ಕಂಪೆನಿಯ ಮರುಕಾರ್ಯನಿರ್ವಹಣೆಗೆ ಒತ್ತಡ ತಂದಿದ್ದ ಅಮೆರಿಕಾ - ವಿಕಿಲೀಕ್


ಸುದ್ದಿಯಲ್ಲಿರುವ ಸ್ಥಳ ನಕ್ಷೆ :

ವಿಶ್ವನಕ್ಷೆಯಲ್ಲಿ ಬಾಂಗ್ಲಾದೇಶ

ಬಾಂಗ್ಲಾದೇಶ ಸ್ವಾಭಾವಿಕ

ನೆರೆ-ಹೊರೆ




  • ಅನಾದಿ ಕಾಲದಿಂದ ಭರತವರ್ಷದ ಭಾಗವಾಗಿದ್ದ ಬಂಗಾಳ 1905ರಲ್ಲಿ ಮೊದಲ ಬಾರಿಗೆ ಬಂಗಾಳ ವಿಭಜನೆಯ ಮೂಲಕ ಭಾರತ ನಕಾಶೆಯಿಂದ ಹೊರಗುಳಿಯಿತು. ಮುಂದೆ 1947ರಲ್ಲಿ ಭಾರತ ಸ್ವತಂತ್ರಗೊಂಡು ಪಾಕಿಸ್ತಾನವೆಂಬೊಂದು ದೇಶ ಉಗಮವಾದಾಗ, ಆ ದೇಶದ ಪೂರ್ವ ಹಿಸ್ಸೆಯಾಗಿ ಅವರಿಗೆ ಬಾಂಗ್ಲಾದೇಶವನ್ನ ನೀಡಲಾಯಿತು.
  • ಹಿಂದೊಮ್ಮೆ ಹಿಂದೂ ನಾಡಾಗಿದ್ದ ಬಾಂಗ್ಲಾದೇಶದಲ್ಲಿ ಇಂದು 90% ಮುಸ್ಲಿಂ ಜನಸಂಖ್ಯೆಯಿದೆ. & ವಿಸ್ತೀರ್ಣದಲ್ಲಿ ಚಿಕ್ಕದಿದ್ದರೂ ಜನಸಂಖ್ಯೆಯಲ್ಲಿ ಜಗತ್ತಿನ 8ನೇ ಸ್ಥಾನ ಪಡೆದುಕೊಂಡಿದೆ. ಅಂತೆಯೇ ಪಾಕಿಸ್ತಾನ 6ನೇ ಸ್ಥಾನ ಪಡೆದಿದೆ.
  • ಬಾಂಗ್ಲಾದೇಶದ ಗಡಿಯನ್ನ ಬಹುತೇಕ ಭಾರತ ಸುತ್ತುವರೆದಿದ್ದರೂ ಆಗ್ನೇಯ ಮೂಲೆಯಲ್ಲಿ ಮಯನ್ಮಾರ್ ಇಣುಕಿದೆ.
  • ಗಂಗಾ & ಬ್ರಹ್ಮಪುತ್ರಾ ನದಿಗಳು ಈ ದೇಶದ ಜೀವನಾಡಿಗಳು. ಭಾರತದಲ್ಲಿ ಗಂಗಾ ಎನಿಸಿಕೊಳ್ಳುವ ನದಿ, ಬಾಂಗ್ಲಾ ಪ್ರವೇಶಿಸಿದ ನಂತರ ಪದ್ಮಾ ಎಂದು ಹೆಸರು ಬದಲಾಯಿಸುತ್ತದೆ !! ಬ್ರಹ್ಮಪುತ್ರಾ ಕೂಡ ಜಮುನಾ ಎಂದು ಹೆಸರು ಬದಲಾಯಿಸಿಕೊಳ್ಳುತ್ತದೆ. ಇದರ ಜೊತೆಗೆ ಮೇಘನಾ ಎಂಬೊಂದು ನದಿಯೂ ಪ್ರಮುಖ ನದಿಯಾಗಿದೆ. ಗಂಗಾ ಜಮುನಾ ಸೇರಿ ಮುಂದೆ ಹೋಗಿ ಮೇಘನಾಳನ್ನ ಕೂಡಿಕೊಂಡು ಬಂಗಾಳಕೊಲ್ಲಿಯಲ್ಲಿ ವಿಶ್ರಮಿಸುತ್ತವೆ.
  • ಈ ನದಿಗಳು ಪ್ರತಿ ವರ್ಷದ ಮಳೆಗಾಲದಲ್ಲಿ ಮುನಿಸಿಕೊಳ್ಳುವ ಪರಿ ಭಯಂಕರ. 1998ರಲ್ಲಿ ಇದೇ ರೀತಿ ಮುನಿಸಿಕೊಂಡಾಗ ಬಾಂಗ್ಲಾದೇಶದ 2/3 ಭೂಭಾಗ ಈ ನದಿಗಳಿಂದ ಮುಚ್ಚಿ ಹೋಯ್ತು. ಅದು ಆಧುನಿಕ ಜಗತ್ತಿನಲ್ಲಿ ದಾಖಲಿಸಲ್ಪಟ್ಟ ಅತಿ ಭಯಂಕರ ಅತಿವೃಷ್ಟಿಯಾಯಿತು.
  • ಸುಂದರಬನ್ ಕಾಡುಗಳು ಇಲ್ಲಿನ ಭೌಗೋಳಿಕ ವಿಶೇಷಗಳು. ಜಗತ್ತಿನ ಬಹುತೇಕ ಮ್ಯಾಂಗ್ರೋವ್ ಕಾಡುಗಳಿಗೆ ಬಾಂಗ್ಲಾ ಆವಾಸಸ್ಥಾನ.
  • ಬಾಂಗ್ಲಾದೇಶ ಸ್ಥಿತಗೊಂಡಿರುವ ಪ್ರಸ್ಥಭೂಮಿಯ ಬಹುತೇಕ ಭಾಗ ಸಮುದ್ರ ಮಟ್ಟದಿಂದ ಕೇವಲ 12m ಅಥವಾ <12m ಎತ್ತರವಿದ್ದು, ಮುಂದೊಮ್ಮೆ ಸಮುದ್ರದ ನೀರಿನ ಮಟ್ಟ ಕೇವಲ 1m ಏರಿದರೂ ಬಹುತೇಕ ಬಾಂಗ್ಲಾ ಸಮುದ್ರದ ತಳ ಸೇರುವ ಅಪಾಯವಿದೆ.
  • ಚಿತ್ತಗಾಂಗ್ ನಿಂದ ಅನತಿ ದೂರದಲ್ಲಿರುವ Cox's Bazaar ಎಂಬಲ್ಲಿ ಜಗತ್ತಿನ ಅತಿ ಉದ್ದದ ಸ್ವಾಭಾವಿಕ ಬೀಚ್ ಇದೆ. ಇದು 120ಕಿಮೀ ವರೆಗೆ ಯಾವುದೇ ತಡೆಯಿಲ್ಲದೇ ಚಾಚಿಕೊಂಡಿದೆ.
  • ಪ್ರತಿ ವರ್ಷ ಈ ದೇಶದ ಮೇಲೆ ಬಂಗಾಳ ಕೊಲ್ಲಿಯಿಂದ ಚಂಡಮಾರುತಗಳು ದಾಳಿಯಿಟ್ಟು, ತಮ್ಮ ಪಾಲಿನ ಬಲಿ ಹೊತ್ತೊಯ್ಯುತ್ತವೆ.
  • ಸೆಣಬು ಇಲ್ಲಿನ ಪ್ರಾದೇಶಿಕ ಬೆಳೆ. ನೀರಿನ ಸರಬರಾಜು ಅವ್ಯಾಹತವಿರುವುದರಿಂದ ಭತ್ತ ಕೂಡ ಇಲ್ಲಿನ ಪ್ರಮುಖ ಬೆಳೆ. ವರ್ಷದಲ್ಲಿ 3 ಸಲ ಭತ್ತದ ರಾಶಿಯಾಗುತ್ತದೆ. ಈಶಾನ್ಯದ ಕಡೆ ಟೀ ಕೂಡ ಬೆಳೆಯಲಾಗುತ್ತದೆ.

 : ರವಿ

Dec 21, 2010

ರಷಿಯಾ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 16

0 ಪ್ರತಿಕ್ರಿಯೆಗಳು
ಸುದ್ದಿ : ಭಾರತಕ್ಕೆ ಭೇಟಿ ನೀಡಿದ ರಷಿಯಾದ ಅಧ್ಯಕ್ಷ ದಿಮಿತ್ರಿ ಮೆಡ್ವೆಡೇವ್


ಸುದ್ದಿಯಲ್ಲಿರುವ ಸ್ಥಳ ನಕ್ಷೆ :


ವಿಶ್ವನಕ್ಷೆಯಲ್ಲಿ ರಷಿಯಾ

ನೆರೆ-ಹೊರೆ

ರಷಿಯಾ ಸ್ವಾಭಾವಿಕ
ಕಾಕಾಸಸ್ ಪರ್ವತಶ್ರೇಣಿ

ರಷಿಯಾದ ಯುರೋಪ್ ಪಾಲನ್ನ ಪ್ರತ್ಯೇಕಿಸಿರುವ ಯೂರಲ್ ಪರ್ವತಶ್ರೇಣಿ(ಹಸಿರು ಬಣ್ಣದಲ್ಲಿರುವುದು ಏಷಿಯಾದ ಭೂಭಾಗ)



ಕ್ಯಾಸ್ಪಿಯನ್ ಸಮುದ್ರ ಸೇರುವ ವೋಲ್ಗಾ
ಬೈಕಲ್ ಸರೋವರ
















ರಾಹುಲ್ ಸಾಂಕೃತ್ಯಾಯನ್


ಟಂಡ್ರಾ ವಲಯ

















  • ಜಗತ್ತಿನ ಅತಿ ವಿಸ್ತೀರ್ಣದ ದೇಶ.
  • ಜಗತ್ತಿನ ಭೂಭಾಗದ 1/9ನೇ ಭಾಗದಷ್ಟು ಭೂಮಿ ರಷಿಯಾ ಒಡೆತನದಲ್ಲಿದೆ.
  • ಆದರೆ ಜನಸಂಖ್ಯೆಯಲ್ಲಿ 9ನೇ ಸ್ಥಾನ ಹೊಂದಿದೆ.
  • ರಷಿಯಾ ದೇಶಕ್ಕೆ ಸಿಕ್ಕಾಪಟ್ಟೆ ನೆರೆ-ಹೊರೆ ದೇಶಗಳಿವೆ : ನಾರ್ವೆ, ಫಿನ್ ಲ್ಯಾಂಡ್, ಇಸ್ಟೋನಿಯಾ, ಲ್ಯಾಟ್ವಿಯಾ, ಲಿಥುಯೇನಿಯಾ, ಪೋಲ್ಯಾಂಡ್, ಬೆಲರೂಸ್, ಉಕ್ರೇನ್, ಜಾರ್ಜಿಯಾ, ಅಜರ್ ಬೈಜಾನ್, ಕಜಕಿಸ್ತಾನ್, ಚೀನಾ, ಮಂಗೋಲಿಯಾ & ಉತ್ತರ ಕೊರಿಯಾ.
  • ಇದಲ್ಲದೇ ರಷಿಯಾ, ಜಪಾನ್ & ಅಮೆರಿಕಾದ ಜಲಗಡಿಯನ್ನೂ(Maritime Border) ಹಂಚಿಕೊಂಡಿದೆ.
  • ಜಗತ್ತಿನಲ್ಲಿರುವ ಅರಣ್ಯದ ಅತಿ ಹೆಚ್ಚು ಭಾಗ ರಷಿಯಾದಲ್ಲಿದೆ.
  • ಹಾಗೇನೇ ಸಿಹಿ ನೀರಿನ ಸಂಗ್ರಹ(Fresh Water) ಕೂಡ ಜಗತ್ತಿನ 25 ಪ್ರತಿಶತ ರಷಿಯಾದ ಸರೋವರ-ನದಿಗಳಲ್ಲಿದೆ.
  • ಈ ದೇಶದ ಇನ್ನೊಂದು ವಿಶೇಷತೆಯೆಂದರೆ : ದೇಶದ ಸ್ವಲ್ಪ ಭಾಗ ಯುರೋಪ್ ಖಂಡಕ್ಕೂ ಚಾಚಿದೆ. ಹೀಗಾಗಿ ಇದು ಯುರೇಷಿಯಾ ಭೂಭಾಗದಲ್ಲಿ ಸ್ಥಿತಗೊಂಡಿದೆ ಎಂದು ಹೇಳಲಾಗುತ್ತದೆ.
  • ಇನ್ನೂ ಒಂದು ವಿಶೇಷತೆಯಿದೆ. ನಮ್ಮ ದೇಶದಲ್ಲಿ ಇರುವುದು ಒಂದೇ ಸಮಯ ವಲಯ(IST). ಆದರೆ ರಷಿಯಾದಲ್ಲಿ 9 ಸಮಯವಲಯಗಳಿವೆ.
  • ಹಿಂದೊಮ್ಮೆ USSR ಹೆಸರಿನಲ್ಲಿ SuperPower ಆಗಿದ್ದು ನಂತರ 1991ರಲ್ಲಿ ಒಡೆದು ರಷಿಯಾ ಆಗಿರುವ ಸಮಾಚಾರ ನಿಮಗೆಲ್ಲ ತಿಳಿದೇ ಇದೆ. ತದನಂತರದಲ್ಲಿ ಅದೊಂದು ಸಂಘಟನೆ ರಚಿಸಿಕೊಂಡಿದೆ. ಅದುವೇ Commonwealth of Independent States. ಈ ಹಿಂದೆ ಅವಿಚ್ಛಿನ್ನ USSR ಭಾಗವಾಗಿದ್ದ ದೇಶಗಳು ಈ ಸಂಘಟನೆಯ ಸದಸ್ಯ ರಾಷ್ಟ್ರಗಳು.
  • ಈ ದೇಶದ ನೈಸರ್ಗಿಕ ಹಾಗೂ ಐತಿಹಾಸಿಕ ಕಾಳಜಿಯ ಬಗ್ಗೆ ತಿಳಿಯಲು ಈ ಅಂಕಿಅಂಶಗಳು ಸಾಕು ನೋಡಿ :
  • 23 ಜಾಗತಿಕ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು(Heritage Sites)
  • 40 ಯುನೆಸ್ಕೋ ರಕ್ಷಿತ ಜೀವವಲಯಗಳು(Biospheres)
  • 40 ರಾಷ್ಟ್ರ ಮಟ್ಟದ ಅಭಯಾರಣ್ಯಗಳು(National Park)
  • 101 ರಕ್ಷಿತ ಅರಣ್ಯಗಳು
ಈ ದೇಶದಲ್ಲಿವೆ.
  • ದೇಶದ ದಕ್ಷಿಣದಿಂದ ಪ್ರಾರಂಭವಾಗುವ ಕಾಡಿನ ಭಾಗದಲ್ಲಿ ಸ್ಟೆಪ್ಪೀ(Steppe) ಹುಲ್ಲುಗಾವಲಿನಿಂದ ಪ್ರಾರಂಭವಾಗಿ ಮಧ್ಯದಲ್ಲಿ ದಟ್ಟ ಕಾಡು ಮುಂದೆ ನಡೆದರೆ ಟಂಡ್ರಾ ಶೀತವಲಯವಿದೆ.
  • ಅದೇ ರೀತಿ ದಕ್ಷಿಣದಲ್ಲಿ ಕಾಕಾಸಸ್(Caucasus) ಪರ್ವತ ಶ್ರೇಣಿಯಿದೆ. ಈ ಶ್ರೇಣಿ ರಾಜಕೀಯವಾಗಿ ಅತ್ಯಂತ ಪ್ರಮುಖವಾಗಿದೆ. ಇಲ್ಲಿ ಸಾಮಾನ್ಯವಾಗಿ ದಿನಪತ್ರಿಕೆಗಳಲ್ಲಿ ಕಾಣಬರುವ ದಕ್ಷಿಣ ಒಸ್ಸೇಷಿಯಾ & ಜಾರ್ಜಿಯಾ ಯುದ್ಧದಲ್ಲಿ ರಷಿಯಾ ಮಧ್ಯ ಬರುವ ಸುದ್ದಿಯನ್ನ ನೆನಪಿಸಿಕೊಳ್ಳಿ.
  • ಅದೇ ರೀತಿ ಯೂರಲ್(Ural) ಪರ್ವತಶ್ರೇಣಿಗಳಿಗೂ ಪ್ರಮುಖ ಸ್ಥಾನವಿದೆ. ಯುರೋಪ್ & ರಷಿಯಾವನ್ನ ಭೇದಿಸುವಲ್ಲಿ ಈ ಪರ್ವತಶ್ರೇಣಿಗಳ ಪಾತ್ರ ಪ್ರಮುಖ.
  • ಅತಿ ಆಳದ, ಸಿಹಿನೀರಿನ, ಸ್ವಚ್ಛ & ಅತ್ಯಂತ ಹಳೆಯ ನೀರಿನ ಸಂಗ್ರಹ ಬೈಕಲ್ ಸರೋವರ ಇಲ್ಲಿದೆ.
  • ನಮ್ಮ ದೇಶಕ್ಕೆ ಗಂಗಾ ನದಿ ಇರುವ ಹಾಗೆ ರಷಿಯಾಗೆ ವೋಲ್ಗಾ ನದಿಯಿದೆ. ಇತಿಹಾಸ - ಪರಂಪರೆ ಜೊತೆಗೆ ಜನರ ಜೀವನಾಡಿಯಾಗಿ ವೋಲ್ಗಾ ಇದೆ. ರಾಹುಲ್ ಸಾಂಕೃತ್ಯಾಯನ್ (Rahul Sankrityayan) ಎಂಬ ವಿದ್ವಾಂಸರು ರಷಿಯಾ ಮುಂತಾದ ದೇಶಗಳಿಗೆ ಭೇಟಿ  ನೀಡಿ ಅಲ್ಲಿನ ಜನಜೀವನವನ್ನ ಅಧ್ಯಯನ ಮಾಡಿ ಪಾಂಡಿತ್ಯ ಸಂಪಾದಿಸಿದ್ದರು. ಅವರು 1944ರಲ್ಲಿ ಸಂಪಾದಿಸಿ ಪ್ರಕಟಿಸಿದ್ದ वोल्गा  से गंगा (Volga Se Ganga) ಎಂಬ ಸಣ್ಣ ಕಥೆಗಳ ಪುಸ್ತಕವನ್ನ ಇಲ್ಲಿ ಜ್ಞಾಪಿಸಿಕೊಳ್ಳಬಹುದು. ಕಾರಣ ಈ ಪುಸ್ತಕ ಭಾರತದ ಸಾಹಿತ್ಯಿಕ ಇತಿಹಾಸದಲ್ಲಿ ಸ್ಥಾನ ಗಿಟ್ಟಿಸಿದೆ. ಮತ್ತಿದು ಇಂಗ್ಲೀಷ್ ಒಳಗೊಂಡಂತೆ ಅನೇಕ ಭಾಷೆಗಳಿಗೆ ತರ್ಜುಮೆಯಾಗಿದೆ.
  • ರಷಿಯಾ ಭೌಗೋಳಿಕತೆ ಬಗ್ಗೆ ಇನ್ನುಳಿದ ಮಾಹಿತಿಯನ್ನ ನೀವು ನನಗೆ ನೀಡಿ !!!

 : ರವಿ

Dec 20, 2010

ಕೀನ್ಯಾ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 15

0 ಪ್ರತಿಕ್ರಿಯೆಗಳು
ಸುದ್ದಿ : ಕೀನ್ಯಾದಲ್ಲಿ ಬಾಂಬ್ ಸ್ಫೋಟ

ಸುದ್ದಿಯಲ್ಲಿರುವ ಸ್ಥಳ ನಕ್ಷೆ :


ಜಾಗತಿಕ ನಕ್ಷೆಯಲ್ಲಿ ಕೀನ್ಯಾ

ಕೀನ್ಯಾ ಭೌಗೋಳಿಕ

ನೆರೆ-ಹೊರೆ

ಗ್ರೇಟ್ ರಿಫ್ಟ್ ವ್ಯಾಲ್ಯಿ

ವಲಸೆ


  • ಆಫ್ರಿಕಾ ಖಂಡದ ಎರಡನೇ ಅತಿ ದೊಡ್ಡ ಪರ್ವತವಾದ Mount Kenya ದಿಂದ ತನ್ನ ಹೆಸರನ್ನು ಪಡೆದಿರುವ ದೇಶ ಕೀನ್ಯಾ. ಸಿಕ್ಕಾಪಟ್ಟೆ ಜೀವವೈವಿಧ್ಯಗಳು  ಈ ದೇಶದ USP(Unique Selling Proposition).
  • ಸೊಮಾಲಿಯಾ, ಇಥಿಯೋಪಿಯಾ, ಸುಡಾನ್, ಉಗಾಂಡಾ & ತಾಂಝಾನಿಯಾ ದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ಕೀನ್ಯಾ, ನೈರುತ್ಯಕ್ಕಿರುವ ವಿಕ್ಟೋರಿಯಾ ಲೇಕ್ ಕೂಡ ಗಡಿಯಂತಿದ್ದು, ಆ ಕೆರೆ ಕೀನ್ಯಾ-ಉಗಾಂಡಾ-ತಾಂಝಾನಿಯಾ ದೇಶಗಳ ಗಡಿಗಳಿಗೂ ಅಂಟಿಕೊಂಡಿದೆ. ಆಗ್ನೇಯಕ್ಕೆ ಹಿಂದೂ ಮಹಾಸಾಗರವಿದೆ.
  • ಕೀನ್ಯಾ ದೇಶದ ಮೇಲೆ ಭೂಮಧ್ಯರೇಖೆ ಹಾದು ಹೋಗುತ್ತದೆ.
  • ಆಫ್ರಿಕಾ ಖಂಡದ ಭೌಗೋಳಿಕ ಆಕರ್ಷಣೆಗಳಲ್ಲೊಂದಾದ Great Rift Valley ಕೀನ್ಯಾ ದೇಶದ ಮೂಲಕ ಹಾದು ಹೋಗುತ್ತದೆ.
  • ಭೂಮಧ್ಯರೇಖೆಯ ಬಳಿ ಇರುವ ಪ್ರದೇಶಗಳಂತೆ ಇಲ್ಲೂ ಕೂಡ, ಮಾರ್ಚ್ ನಿಂದ ಮೇವರೆಗೆ ನಿರಂತರ ಮಳೆಯಿದ್ದು ಅಕ್ಟೋಬರ್ ಕಾಲದಲ್ಲಿ ಮತ್ತೊಮ್ಮೆ ಮಳೆ ಸುರಿಯುತ್ತದೆ.
  • ಜೂನ್ ನಿಂದ ಸಪ್ಟೆಂಬರ್ ವರೆಗೆ ಪ್ರಾಣಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ತಂಡೋಪತಂಡವಾಗಿ ವಲಸೆ ಹೋಗುವ ದೃಶ್ಯ ಛಾಯಾಗ್ರಾಹಕರಿಗೆ ಕೈಬೀಸಿ ಕರೆಯುವ ರಮಣೀಯ ಆಕರ್ಷಣೆ.

: ರವಿ

Dec 6, 2010

ಈಜಿಪ್ಟ್ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 14

0 ಪ್ರತಿಕ್ರಿಯೆಗಳು
ಸುದ್ದಿ : ಈಜಿಪ್ಟ್ ಕಡಲ ತೀರದಲ್ಲಿ ಶಾರ್ಕ್ ಹಾವಳಿ


ಸುದ್ದಿಯಲ್ಲಿರುವ ಸ್ಥಳ ನಕ್ಷೆ :

ಜಾಗತಿಕ ನಕ್ಷೆಯಲ್ಲಿ ಈಜಿಪ್ಟ್

ನೆರೆ-ಹೊರೆ

ನೈಲ್ ನದಿಗುಂಟ ನೆಲೆಗೊಂಡಿರುವ ಚಾರಿತ್ರಿಕ ಸ್ಥಳಗಳು

ತೇಜಸ್ವಿ





  • ಆಫ್ರಿಕಾ ಖಂಡದ ಭೂಭಾಗ ತನ್ನ ಈಶಾನ್ಯ ತುದಿಗೆ ಏಷ್ಯಾ ಖಂಡಕ್ಕೆ ಮುತ್ತಿಟ್ಟಿರುವ ಜಾಗದಲ್ಲಿ ಸ್ಥಿತಗೊಂಡಿದೆ ಈಜಿಪ್ಟ್.
  • ಪುರಾತನ ಅನ್ನುವ ಪದಕ್ಕೆ ಅನ್ವರ್ಥದಂತೆ ನೆನಪಾಗುವ ಈಜಿಪ್ಟ್ ದೇಶ, ಜಗತ್ತಿನಲ್ಲಿ ಅಲೆಮಾರಿ ಮಾನವ ನಾಗರಿಕತೆಯನ್ನ ಕಂಡುಕೊಂಡ ಪ್ರಮುಖ ಚಾರಿತ್ರಿಕ ಸ್ಥಳಗಳಲ್ಲಿ ಒಂದು.
  • ಈಜಿಪ್ಟ್ ಎಂದು ನಮಗೆಲ್ಲಾ ಪರಿಚಿತವಿರುವ ಈ ದೇಶದ ಅಧಿಕೃತ ಹೆಸರು : ಇಸ್ಲಾಮಿಕ್ ರಿಪಬ್ಲಿಕ್ ಆಫ್ ಈಜಿಪ್ಟ್.
  • ಪೂರ್ವದಿಂದ ಪ್ರಾರಂಭಿಸಿ ಮತ್ತೆ ಪೂರ್ವಕ್ಕೇ ತಲುಪಿದರೆ ಕೆಂಪು ಸಮುದ್ರ, ಇಸ್ರೇಲ್, ಮೆಡಿಟರೇನಿಯನ್ ಸಮುದ್ರ, ಲಿಬಿಯಾ & ಸುಡಾನ್ ದೇಶಗಳು ಈಜಿಪ್ಟ್ ದೇಶದ ಭೂಭಾಗಕ್ಕೆ ಅಂಟಿಕೊಂಡಿರುವುದನ್ನ ಕಾಣಬಹುದು.
  • ಈಜಿಪ್ಟ್ ಪುರಾತನ ನಾಗರೀಕತೆ ಎನಿಸಿಕೊಂಡಿದ್ದರೂ ಒಂದು ಸಂಶೋಧನೆಯ ಪ್ರಕಾರ ಪ್ರಾರಂಭದಿಂದಲೂ ಈ ಪ್ರದೇಶ ಭಾರಿ ಅನಿಸುವ ಜನಸಾಂದ್ರತೆಯನ್ನೇನೂ ಹೊಂದಿರಲಿಲ್ಲ. ಬದಲಿಗೆ ಇಂದು ಜಗತ್ತಿನ ಅತಿ ವಿಸ್ತೀರ್ಣವಾದ ಮರುಭೂಮಿಯಾಗಿ ಮೆರೆಯುತ್ತಿರುವ ಸಹಾರಾ ಅಂದು ಹಸಿರು ಕಾಡಿನಿಂದಾವೃತವಾದ ಭೂಪ್ರದೇಶವಾಗಿತ್ತು. ಆದರೆ ಬೇರೆಲ್ಲೋ ಆದ ವಾತಾವರಣ ವೈಪರೀತ್ಯ ಆಫ್ರಿಕಾ ಖಂಡದ ಈ ಭಾಗದ ಮೇಲೆ ಪರಿಣಾಮ ಬೀರಿ ಕಗ್ಗಾಡು - ಬೆಂಗಾಡಾಯಿತು. ಈ ಪರಿವರ್ತನೆಯಲ್ಲಿ ಅಲ್ಲಿ ನೆಲೆಗೊಂಡಿದ್ದ ಜನಸ್ತೋಮವನ್ನ ಕೈಬೀಸಿ ಕರೆದದ್ದು ಪೂರ್ವದ ಕಡೆಗೆ ಹರಿಯುತ್ತಿದ್ದ ನೈಲ್ ನದಿ.
  • ನೈಲ್ ನದಿಯ ನಿಗೂಢ ಹುಟ್ಟು & ಹರಿವಿನ ಬಗ್ಗೆ ತಿಳಿಯಲು ನಮ್ಮ ತೇಜಸ್ವಿಯವರ ಅಲೆಮಾರಿ ಅಂಡಮಾನ್ & ಮಹಾನದಿ ನೈಲ್ ಓದಲು ಮರೆಯಬೇಡಿ.
  • ಸುತ್ತಲಿನ ದೇಶಗಳಂತೆ ಇದೂ ಕೂಡ ಇಸ್ಲಾಂ ಧರ್ಮವನ್ನ ಬಾಚಿ ತಬ್ಬಿರುವ ದೇಶ.
  • ಈ ದೇಶದ ಭೌಗೋಳಿಕ ಆಕರ್ಷಣೆಯೆಂದರೆ ಅದು ನೈಲ್ ನದಿ. ನೈಲ್ ನದಿಯ ಮೋಡಿಯೆಂದರೆ ದೇಶದ 99 ಪ್ರತಿಶತ ಜನಸಂಖ್ಯೆ ದೇಶದ 6 ಪ್ರತಿಶತ ಭೂಮಿಯಲ್ಲಿ ಮಾತ್ರ ನೆಲೆಗೊಂಡಿದ್ದು, ಅದೂ ನೈಲ್ ನದಿಯ ದಡಗಳಲ್ಲಿ !!
  • ನೈಲ್ ನದಿಯ ಸುತ್ತಲಿನ ಫಲವತ್ತಾದ ಭೂಮಿಯನ್ನ ಬಿಟ್ಟರೆ ದೇಶದ ಬಹುಭಾಗ ಸಹಾರಾ ಮರುಭೂಮಿ & ಲಿಬಿಯಾ ಮರುಭೂಮಿಗೆ ಆಹುತಿಯಾಗಿದೆ.
  • ಪಿರಾಮಿಡ್ ಗಳು, ಸ್ಫಿಂಕ್ಸ್ & ಇತ್ತೀಚಿನ ಸುಯೇಜ್ ಕಾಲುವೆ, ಇವಿಷ್ಟು ದೇಶದ ಮಾನವ ನಿರ್ಮಿತ ಆಕರ್ಷಣೆಗಳು.
  • ಇದೇ ಸಂದರ್ಭದಲ್ಲಿ ಪಿರಾಮಿಡ್ ಗಳ ನಿಗೂಢ ರಚನೆಯ ಬಗ್ಗೆ ತಿಳಿಯಲು ಪ್ರಯತ್ನಿಸೋಣ :
ದೇಶದ ತುಂಬೆಲ್ಲಾ ಹರಡಿರುವ ಪಿರಾಮಿಡ್ ಗಳಲ್ಲಿ ಮುಖ್ಯವಾಗಿ ಗಮನ ಸೆಳೆದಿರೋದು ಗಿಝಾ ಪಟ್ಟಣದ ಮಹಾ ಪಿರಾಮಿಡ್. ಎಲ್ಲ ಪಿರಾಮಿಡ್ ಗಳಂತೆ ಇದೂ ಕೂಡ ರಾಜನೊಬ್ಬನ ಮಮ್ಮಿಯ ಆವಾಸ ಸ್ಥಾನವೆನ್ನುವುದು ಸಾಮಾನ್ಯ ಅಂಶವಾದರೂ, ಅದರ ಬೃಹತ್ ಗಾತ್ರ(480.6 ಅಡಿ ಎತ್ತರ) ಹಾಗೂ ಅಲ್ಲಿ ಬಳಸಲಾಗಿರುವ ಕೆಲವು ಕಲ್ಲುಗಳ ತೂಕ 25000 ರಿಂದ 80000 ಕೆ.ಜಿ.ವರೆಗೂ ಇರುವ ಅಂಶಗಳು ಈ ಪಿರಾಮಿಡ್ ಅನ್ನು ತನ್ನ ಸಹಚರರಿಗಿಂತ ಎತ್ತರದಲ್ಲಿ ನಿಲ್ಲುವಂತೆ ಮಾಡಿವೆ. ಈ ಕಲ್ಲುಗಳು ದೊರೆಯುವುದು ಗಿಝಾ ಪಟ್ಟಣದಿಂದ 500 ಮೈಲಿ ದೂರದಲ್ಲಿರುವ ಆಸ್ವಾನ್ ನಗರದ ಕ್ವಾರಿಯಲ್ಲಿ. ಆ ಗಾತ್ರ-ಆ ತೂಕದ ಕಲ್ಲುಗಳನ್ನ ತಂದು, ಆ ಎತ್ತರದ ಕಟ್ಟಡದಲ್ಲಿ ಬಳಸಿ ಅಂದು ಲಭ್ಯವಿದ್ದ ತಂತ್ರಜ್ಞಾನದೊಂದಿಗೆ  ಕ್ರಿ.ಪೂ.2560ರಲ್ಲಿ 20 ವರ್ಷಗಳ ಪರಿಶ್ರಮದೊಂದಿಗೆ ಅವರು ಕಟ್ಟಿದ ರೀತಿ ಇಂದಿಗೂ ನಿಗೂಢ. ಅಷ್ಟು ತೂಕದ ಕಲ್ಲುಗಳನ್ನ ಅಷ್ಟು ಎತ್ತರದ ಕಟ್ಟಡದ ತುದಿಯವರೆಗೆ ಹೇಗೆ ಸಾಗಿಸಲಾಯಿತು, ಅಲ್ಲಿರುವ ನಿಗೂಢ ಖಾಲಿ ಜಾಗಗಳು, ನಿಗೂಢ ಕೋಣೆಯ ನಿಗೂಢ ಆಕಾರಗಳು .. ಎಲ್ಲವೂ ನಿಗೂಢವೇ. ಒಂದು ವಾದದ ಪ್ರಕಾರ : ಕಟ್ಟಡದ ಬದಿಗಳಲ್ಲಿ Slope ಒಂದನ್ನ ನಿರ್ಮಿಸಿ ಅದರ ಮೇಲಿನಿಂದ ಭಾರದ ಕಲ್ಲುಗಳನ್ನ ಸಾಗಿಸಿ ಮೇಲ್ಭಾಗದವರೆಗೂ ಒಯ್ಯಲಾಯಿತು. ಸದ್ಯಕ್ಕೆ ಇದು ಕಟ್ಟಡದ ನಿರ್ಮಾಣಕ್ಕೆ ಬಳಸಿದ ತಂತ್ರಗಾರಿಕೆಗೆ ಸಂಬಂಧಿಸಿದಂತೆ ಮಾನ್ಯತೆ ಹೊಂದಿರುವ ವಾದ. ಆದರೆ ಅಲ್ಲಿರುವ ನಿಗೂಢ ಕೋಣೆಗಳು & ಕಟ್ಟಡದ ವಾಸ್ತು ವಿನ ಬಗ್ಗೆ ಇನ್ನೂ ಅನೇಕ ಸಂಶಯಗಳು ಬಗೆಹರಿಯಬೇಕಿವೆ.




: ರವಿ

Dec 4, 2010

ಸ್ಪೇನ್ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 13

0 ಪ್ರತಿಕ್ರಿಯೆಗಳು
ಸುದ್ದಿ : ಸ್ಪೇನ್ ನಲ್ಲಿ ಕಾರ್ಮಿಕರ ಮುಷ್ಕರದ ಮಧ್ಯೆ ತುರ್ತು ಪರಿಸ್ಥಿತಿ ಘೋಷಿಸಿದ ಸರ್ಕಾರ


ಸುದ್ದಿಯಲ್ಲಿರುವ ಸ್ಥಳ ನಕ್ಷೆ :

ಜಾಗತಿಕ ನಕ್ಷೆಯಲ್ಲಿ ಸ್ಪೇನ್

ಭೌಗೋಳಿಕ ಸ್ಪೇನ್ ನಕ್ಷೆ

ನೆರೆ-ಹೊರೆ



  • ನಮಗೆಲ್ಲ ಸ್ಪೇನ್ ಎಂದು ಪರಿಚಿತವಾಗಿರುವ ಈ ದೇಶದ ಅಧಿಕೃತ ಹೆಸರು ಕೇಳಲು ಚೆನ್ನಾಗಿದೆ : ಕಿಂಗಡಮ್ ಆಫ್ ಸ್ಪೇನ್ (Kingdom of Spain).
  • ಪೋರ್ತುಗಲ್, ಫ್ರಾನ್ಸ್, ಅಂಡೋರಾ & ಬ್ರಿಟಿಷರ ಆಡಳಿತದಲ್ಲಿರುವ ಜಿಬ್ರಾಲ್ಟರ್ ಎಂಬ ತುಂಡುಭೂಮಿಯೂ ಸ್ಪೇನ್ ದೇಶಕ್ಕೆ ನೆರೆದೇಶಗಳಾಗಿವೆ. ಸ್ಪೇನ್ & ಆಫ್ರಿಕಾ ಖಂಡದ ಮೊರೊಕ್ಕೊ ದೇಶದ ಗಡಿಪ್ರದೇಶ  ಭಾರತ ಶ್ರೀಲಂಕಾ ಗಡಿಯನ್ನ ನೆನಪಿಸುತ್ತದೆ.
  • ಉತ್ತರ ಅಟ್ಲಾಂಟಿಕ್ ಮಹಾಸಾಗರ ಹಾಗೂ ಮೆಡಿಟರೇನಿಯನ್ ಸಮುದ್ರ - ಎರಡು ಜಲಪ್ರದೇಶಗಳೂ ದೇಶವನ್ನ ಸುತ್ತುವರೆದಿವೆ.
  • ಸದರಿ ದೇಶ ಯುರೋಪಿಯನ್ ಯೂನಿಯನ್ ನ ಸದಸ್ಯ ದೇಶವೂ ಹೌದು. ಓದುಗರು ಇಲ್ಲಿ ಗಮನಿಸಬೇಕಿರುವುದು : ಎಲ್ಲ ಯುರೋಪ್ ಖಂಡದ ದೇಶಗಳೂ ಯುರೋಪ್ ಒಕ್ಕೂಟದ ಸದಸ್ಯ ರಾಷ್ಟ್ರಗಳಲ್ಲ. ಇನ್ನೂ ಕೆಲವು ರಾಷ್ಟ್ರಗಳು ಸೇರ್ಪಡೆಯಾಗದೇ ಹೊರಗುಳಿದಿವೆ.
  • ಪ್ರತಿ ದೇಶ ತನ್ನ Official Language ಗಳನ್ನ ಹೊಂದಿರುತ್ತದೆ. ಅದರಲ್ಲೂ 1st Official Language ಮತ್ತೆ 2nd Official Language ..ಹೀಗೆ ಇರುತ್ತವೆ. ಹಾಗೆ ಜಗತ್ತಿನ ವಿವಿಧ ದೇಶಗಳು Adopt ಮಾಡಿಕೊಂಡಿರುವ ಸರ್ಕಾರಿ ಪ್ರಥಮ ಭಾಷೆಗಳಲ್ಲಿ(1st Official Language) ಅತಿ ಹೆಚ್ಚು ಬಳಸಲ್ಪಡುವ ಭಾಷೆ ಮ್ಯಾಂಡರಿನ್ ಬಿಟ್ಟರೆ, ಸ್ಪ್ಯಾನಿಷ್. ನಂತರದ ಸ್ಥಾನ ಇಂಗ್ಲೀಷ್. ತದನಂತರದ್ದು ಹಿಂದಿಗೆ. ಅಷ್ಟು ಚಿಕ್ಕ ದೇಶ ಇಷ್ಟೊಂದು ಜನರನ್ನ ಹೊಂದಿದೆಯಾ ಅಂತ ಅಚ್ಚರಿಪಟ್ಟಿರಾ ?! ಇತಿಹಾಸದ ಪುಟಗಳನ್ನ ತಿರುವಿ ಹಾಕಿದರೆ ನಿಮಗೆ ಸತ್ಯ ಗೊತ್ತಾಗುತ್ತದೆ. ಸ್ಪೇನ್ ಹಿಂದೊಮ್ಮೆ ಬ್ರಿಟಿಷರ ಹಾಗೇ ತನ್ನದೂ ಒಂದು ಸಾಮ್ರಾಜ್ಯವನ್ನ ಸ್ಥಾಪಿಸಿತ್ತು. ದಕ್ಷಿಣ ಅಮೆರಿಕಾ ಖಂಡದ ಬಹುತೇಕ ಭಾಗ ಸ್ಪೇನ್ ನ ಆಳ್ವಿಕೆಯಲ್ಲಿತ್ತು. ಆ ಕಾರಣಕ್ಕಾಗಿಯೇ ಇಂದು ಮಧ್ಯ ಅಮೆರಿಕಾ & ದಕ್ಷಿಣ ಅಮೆರಿಕಾದ ಪಶ್ಚಿಮ ಭಾಗ ಪೂರ್ತಿ ಸ್ಪ್ಯಾನಿಷ್ ಭಾಷೆಯನ್ನ ಅಧಿಕೃತ ಭಾಷೆಯಾಗಿ ಹೊಂದಿದೆ.
  • ಇದೊಂದು ಅಭಿವೃದ್ಧಿ ಹೊಂದಿದ ದೇಶ. ಸಾಕ್ಷಿ ಬೇಕೆಂದರೆ : Human Development Index(HDI) ನಲ್ಲಿ ಜಾಗತಿಕ ಮಟ್ಟದಲ್ಲಿ 20ನೇ ಸ್ಥಾನ ಹೊಂದಿದೆ(ಭಾರತ-134). ಜೀವನ ಶೈಲಿಯ ಗುಣಮಟ್ಟದ ಸೂಚ್ಯಂಕದಲ್ಲಿ ಜಾಗತಿಕ ಮಟ್ಟದಲ್ಲಿ 10ನೇ ಸ್ಥಾನ ಹೊಂದಿದೆ.
  • ಎತ್ತರದ ಪ್ರಸ್ಥಭೂಮಿಗಳು & ಪರ್ವತ ಸಾಲುಗಳು ದೇಶವನ್ನಲಂಕರಿಸಿವೆ.
  • 2010ರ ಇತಿಹಾಸದ ಪುಟಗಳಲ್ಲಿ ಸ್ಪೇನ್ ತನ್ನ ಅಚ್ಚೊತ್ತಿದೆ. ಹಾಂ, ಫಿಫಾ ಫುಟ್ಬಾಲ್ ವಿಶ್ವಕಪ್ 2010ನ್ನು ಗೆಲ್ಲುವ ಮೂಲಕ.

: ರವಿ

Dec 3, 2010

ಹೈಟಿ - ಸುದ್ದಿಯಲ್ಲಿರುವ ಸ್ತಳ ನಕ್ಷೆ - 12

0 ಪ್ರತಿಕ್ರಿಯೆಗಳು
ಸುದ್ದಿ : ಹೈಟಿಯಲ್ಲಿ Endemic ಸ್ವರೂಪ ತಲುಪಿದ ಕಾಲರಾ



ಸುದ್ದಿಯಲ್ಲಿರುವ ಸ್ಥಳ ನಕ್ಷೆ :


ಜಾಗತಿಕ ನಕ್ಷೆಯಲ್ಲಿ ಹೈಟಿ





  • ಅಮೆರಿಕ ಸಂಯುಕ್ತ ಸಂಸ್ಥಾನದ ಆಗ್ನೇಯಕ್ಕೆ ಕೆರಿಬಿಯನ್ ಸಮುದ್ರದಲ್ಲಿ ಹಿಸ್ಪ್ಯಾನಿಯೊಲಾ(Hispaniola) ದ್ವೀಪಭೂವಿಯ ಪಶ್ಚಿಮ ಭಾಗಕ್ಕಿರುವ ಪ್ರದೇಶವೇ ಹೈಟಿ ದೇಶ.
  • ಪೂರ್ವ ಭಾಗಕ್ಕೆ ಡೊಮಿನಿಕನ್ ರಿಪಬ್ಲಿಕ್ ನೊಂದಿಗೆ ಗಡಿ ಹಂಚಿಕೊಂಡಿದೆ. ದೇಶವೊಂದು ದ್ವೀಪವಾಗಿರುವುದರಿಂದ ನೆರೆದೇಶಗಳನ್ನ ಹೇಳುವುದು ಸೂಕ್ತವಲ್ಲದಿದ್ದರೂ ವಾಯುವ್ಯಕ್ಕೆ ಕ್ಯೂಬಾ ಇದೆ. ವಾಯುವ್ಯದ ಆಚೆಯ ವಾಯುವ್ಯಕ್ಕೆ ಬೃಹತ್ ಅಮೆರಿಕಾ ಸಂಯುಕ್ತ ಸಂಸ್ಥಾನವಿದೆ.  ಪಶ್ಚಿಮಕ್ಕೆ ಜಮೈಕಾ ಇದೆ.
  • ಹೈಟಿ ದೇಶದ ಅಗ್ಗಳಿಕೆಯೆಂದರೆ ವಿಶ್ವದಲ್ಲಿಯೇ ಪ್ರಥಮವಾಗಿ ಮತ್ತು ಬಹು ಹಿಂದೆ ಅಂದರೆ 1804ರಲ್ಲೇ ಸ್ವಾತಂತ್ರ್ಯ ಘೋಷಿಸಿಕೊಂಡಿತು. ಅದು ಸಾಮಾನ್ಯ ಸ್ವಾತಂತ್ರ್ಯವಲ್ಲ. ಬಿಳಿ ತೊಗಲಿನ ಫ್ರೆಂಚರಿಂದ ಕಪ್ಪು ವರ್ಣೀಯರು ಪಡೆದ ಸ್ವಾತಂತ್ರ್ಯವದು. ವರ್ಣಭೇದ ನೀತಿ ಎಂಬುದೊಂದು ಹುಟ್ಟುವ ಸೂಚನೆಯೂ ಇಲ್ಲದ ಆ ದಿನಗಳಲ್ಲಿ ಅಲ್ಲಿನ ಸ್ಥಳೀಯ ಕಪ್ಪು ಜನ ಪಡೆದ ಸ್ವಾತಂತ್ರ್ಯ ಅನನ್ಯವೇ ಸರಿ.
  • ಅಮೆರಿಕಾ ಭೂಪ್ರದೇಶದಲ್ಲಿ ಫ್ರೆಂಚ್ ಭಾಷೆ ರಾಜಭಾಷೆಯಾಗಿರುವ ಎರಡೇ ದೇಶಗಳಲ್ಲಿ ಇದೂ ಒಂದು. ಇನ್ನೊಂದು ಕೆನಡಾ.
  • ಕೆರಿಬಿಯನ್ ದೇಶಗಳಲ್ಲಿ ವಿಸ್ತೀರ್ಣದಲ್ಲಿ ಮೂರನೇ ಸ್ಥಾನದಲ್ಲಿದೆ ಹೈಟಿ.













    • ಇದೇ ಸಂದರ್ಭದಲ್ಲಿ ಕೆರಿಬಿಯನ್ ಪ್ರದೇಶದ ಭೂಗೋಳವನ್ನ ತಿಳಿಯುವುದು ಒಳಿತು : ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕದ ನಡುವೆ ಹಾಗೂ ಮಧ್ಯಅಮೆರಿಕಾದ ಪೂರ್ವಕ್ಕೆ ಹಾಗೂ ಉತ್ತರ ಅಟ್ಲಾಂಟಿಕ್ ಮಹಾಸಾಗರದ ಪಶ್ಚಿಮಕ್ಕೆ ಇರುವ ಪ್ರದೇಶವೇ ಕೆರಿಬಿಯನ್. ಈ ಪ್ರದೇಶ ಸಮುದ್ರದಿಂದಾವೃತವಾಗಿದ್ದರೂ ಕೆಳಭಾಗದಲ್ಲಿ ಕೆರಿಬಿಯನ್ ಪ್ಲೇಟ್ ಆ ಸಮುದ್ರವನ್ನ ಹಿಡಿದುಕೊಂಡಿದೆ. ಸದ್ಯ ನಾವು ಅಭ್ಯಸಿಸುತ್ತಿರುವ ಹೈಟಿ, ಗ್ರೇಟರ್ ಆ್ಯಂಟಿಲಸ್(Greater Antilles) ಎಂದು ಗುರುತಿಸಲ್ಪಟ್ಟಿರುವ ಕ್ಯೂಬಾ : ಹಿಸ್ಪ್ಯಾನಿಯಾಲೊ : ಜಮೈಕಾ : ಪೋರ್ಟೋ ರಿಕೊ ದ್ವೀಪಗಳನ್ನೊಳಗೊಂಡ ದ್ವೀಪಸಮೂಹ. ಈ ಗ್ರೇಟರ್ ಆ್ಯಂಟಿಲಸ್ ಎನ್ನುವುದು ಕೆರಿಬಿಯನ್ ಸಮುದ್ರದಲ್ಲಿ ಹರಡಿರುವ ದ್ವೀಪಗಳು, ವಿವಿಧ ಸಮೂಹಗಳಲ್ಲಿ ವಿಂಗಡನೆಯಾಗಿದ್ದು, ಅಂಥ ಒಂದು ಸಮೂಹಕ್ಕಿರುವ ಹೆಸರು. ಹಿಂದೊಮ್ಮೆ ಕ್ರಿಕೆಟ್ ಸಾಮ್ರಾಜ್ಯದ ಅಧಿಪತಿಗಳಾಗಿದ್ದ ವೆಸ್ಟ್ ಇಂಡೀಸ್ ಕೂಡ ಒಂದು ಕೆರಿಬಿಯನ್ ದ್ವೀಪ ಸಮೂಹವೇ. ಆದರೆ ದ್ವೀಪ ಸಮೂಹಗಳ ನಿಖರ ವಿಂಗಡಣೆ ಹೀಗಿದೆ :
    • Lucayan Archipelago
    • Greater Antilles
    • Lesser Antilles
    ಕೆರಿಬಿಯನ್ ಪ್ರದೇಶದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
    • ಹೈಟಿಯಲ್ಲಿ 1925ರ ಮಾಹಿತಿಯ ಪ್ರಕಾರ ದೇಶದ 60% ಭಾಗ ಅರಣ್ಯದಿಂದಾವೃತವಾಗಿತ್ತು. ಆದರೆ ಬಡತನ & ಅನಕ್ಷರತೆಯಿಂದಾಗಿ ; ಅಲ್ಲಿನ ಜನರ ದಿನಿತ್ಯದ ಸೌದೆ..ಇತ್ಯಾದಿ ಉಪಯೋಗಕ್ಕಾಗಿ ; ಇಂದಿಗೆ ಆ ಅರಣ್ಯದ 98% ಭಾಗ ಕಣ್ಮರೆಯಾಗಿದೆ. ಎಂಥ ದೌರ್ಭಾಗ್ಯ !!
    • ದೇಶ ಗುಡ್ಡಗಾಡುಗಳಿಂದ ತುಂಬಿದ್ದು ಭೂಕಂಪಗಳ ನೆಲೆವೀಡಾಗಿದೆ. ಇದೇ ವರ್ಷ ಎರಗಿದ ಭೀಭತ್ಸ ಭೂಕಂಪಕ್ಕೆ ಸುಮಾರು 2,25,000 ಜನ ಬಲಿಯಾಗಿದ್ದಾರೆ.
    • Human Development Index ಪ್ರಕಾರ ಸದರಿ ದೇಶ ಉತ್ತರ ಅಮೆರಿಕಾದ ಅತಿ ಬಡ ದೇಶ. ಹೀಗಾಗಿ ಅಲ್ಲಿನ ಜನರಿಗೆ ಯಾವ ಆಧುನಿಕ ಸೌಲಭ್ಯಗಳು ತಲುಪುವುದಿಲ್ಲ ಎಂಬುದು ನಿರ್ವಾಚ್ಯ.
    • ಆರೋಗ್ಯ ಸೌಲಭ್ಯಗಳು ದುರ್ಲಭವಾಗಿರುವ ಹೈಟಿಯಲ್ಲಿ ಕಾಲರಾ ಕಾಳ್ಗಿಚ್ಚಿನಂತೆ (Endemic) ಹಬ್ಬಿರುವುದು ಆಶ್ಚರ್ಯದ ಮಾತೇನಲ್ಲ.

     : ರವಿ

    Dec 2, 2010

    ಸೊಮಾಲಿಯಾ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 11

    0 ಪ್ರತಿಕ್ರಿಯೆಗಳು
    ಸುದ್ದಿ : ಸೊಮಾಲಿಯಾದಲ್ಲಿನ ಹಿಂಸೆಯನ್ನ ನಂದಿಸಲು 8000 AU (African Union) ಸೈನಿಕರು ಮೊಗದಿಶು ಪಟ್ಟಣಕ್ಕೆ ರವಾನೆ

    ಸುದ್ದಿಯಲ್ಲಿರುವ ಸ್ಥಳ ನಕ್ಷೆ :


    ಜಾಗತಿಕ ನಕ್ಷೆಯಲ್ಲಿ ಸೊಮಾಲಿಯಾ


    ನೆರೆ-ಹೊರೆ

    ಭೌಗೋಳಿಕ


    • ಕಮ್ಯೂನಿಸ್ಟರ ಕೈಯಲ್ಲಿರುವ ರಿಪಬ್ಲಿಕ್ ಆಫ್ ಸೊಮಾಲಿಯಾ ಆಫ್ರಿಕಾ ಖಂಡದ ಈಶಾನ್ಯಕ್ಕೆ ಚಾಚಿರುವ ಘೇಂಡಾಮೃಗದ ಕೊಂಬಿನಂತಿರುವ ಭೂಭಾಗವನ್ನ(Horn of Africa ಎಂದು ಭೂಗೋಳಶಾಸ್ತ್ರಜ್ಞರು ಕರೆದಿದ್ದಾರೆ) ಆಕ್ರಮಿಸಿದೆ.
    • ಉತ್ತರಕ್ಕೆ ಯೆಮೆನ್ ಒಳಗೊಂಡು ಏಡನ್ ಕೊಲ್ಲಿ, ವಾಯುವ್ಯಕ್ಕೆ ಜಿಬೌತಿ(Djibouti), ಪಶ್ಚಿಮಕ್ಕೆ ಇಥಿಯೋಪಿಯಾ, ದಕ್ಷಿಣಕ್ಕೆ ಕೀನ್ಯಾ ಮತ್ತು ಪೂರ್ವಕ್ಕೆ ಹಿಂದೂ ಮಹಾಸಾಗರದಿಂದ ಸುತ್ತುವರೆಯಲ್ಪಟ್ಟಿದೆ.
    • ಭೂಮಧ್ಯರೇಖೆಗೆ ಹತ್ತಿರವಿರುವ ಈ ದೇಶದಲ್ಲಿ ವರ್ಷವೊಂದರಲ್ಲಿ ಗುರುತಿಸಬಹುದಾದ ಅಂಥ ತಾಪಮಾನ ವ್ಯತ್ಯಾಸಗಳಾಗದೇ ಹೋದರೂ ಅಲ್ಲಿ ಋತುಗಳನ್ನ ಈ ರೀತಿ ಗುರುತಿಸಿದ್ದಾರೆ.
    ಡಿಸೆಂಬರ್ ನಿಂದ ಮಾರ್ಚ್ ವರೆಗೆ : ಬೇಸಿಗೆ
    ಏಪ್ರಿಲ್ ನಿಂದ ಜೂನ್ ವರೆಗೆ : ಮಳೆಗಾಲ
    ಜುಲೈ ನಿಂದ ಸಪ್ಟೆಂಬರ್ ವರೆಗೆ : ಮೆದುಬೇಸಿಗೆ
    ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ : ಮೆದುಮಳೆಗಾಲ
    • ಸೊಮಾಲಿಯಾ, ಆಫ್ರಿಕಾ ಖಂಡದಲ್ಲೇ ಅತಿ ಉದ್ದದ ಕರಾವಳಿ ತೀರ ಹೊಂದಿರುವ ದೇಶ.
    • ಸುನ್ನಿ ಮುಸ್ಲಿಮರು ದೇಶದ ಜನಸಂಖ್ಯೆಯ ಪರಿಪೂರ್ಣ ಎನ್ನಬಹುದಾದ ಭಾಗವಾಗಿದ್ದಾರೆ.
    • ದೇಶದ ಭೂಬಾಗ ಬಹುತೇಕ ಸಮತಟ್ಟಾಗಿದ್ದು ಉತ್ತರಕ್ಕೆ ಅರೆಮರುಭೂಮಿ, ಈಶಾನ್ಯಕದ್ಕೆ ಪರ್ವತ ಸಾಲುಗಳು - ಪ್ರಮುಖ ಎಂದು ಹೇಳಬಹುದಾದ ಭೌಗೋಳಿಕ ಅಂಶಗಳು.

    : ರವಿ

    Dec 1, 2010

    ವೆನೆಜುಯೆಲಾ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 10

    0 ಪ್ರತಿಕ್ರಿಯೆಗಳು
    ಸುದ್ದಿ : ವೆನೆಜುಯೆಲಾದಲ್ಲಿ ಭೀಷಣ ಮಳೆ ; ರಾಷ್ಟ್ರೀಯ ತುರ್ತು ಘೋಷಣೆ


    ಸುದ್ದಿಯಲ್ಲಿರುವ ಸ್ಥಳ ನಕ್ಷೆ :

    ಜಾಗತಿಕ ನಕ್ಷೆಯಲ್ಲಿ ವೆನೆಜುಯೆಲಾ

    ನೆರೆ-ಹೊರೆ

    ಭೌಗೋಳಿಕ



    Tepuis ಪರ್ವತಸಾಲು
    ಆ್ಯಂಜೆಲ್ ಜಲಪಾತ











    UP Animation ಚಲನಚಿತ್ರದ ಒಂದು STILLPHOTO



    • ಅಧಿಕೃತವಾಗಿ ಬೊಲಿವಾರಿಯನ್ ರಿಪಬ್ಲಿಕ್ ಆಫ್ ವೆನೆಜುಯೆಲಾ ಎನಿಸಿಕೊಳ್ಳುವ ವೆನೆಜುಯೆಲಾ ದಕ್ಷಿಣ ಅಮೆರಿಕ ಖಂಡದ ಉತ್ತರದಲ್ಲಿ ಸ್ಥಿತಗೊಂಡಿರುವ ಜಗತ್ತಿನಲ್ಲೇ ಅತಿ ಹೆಚ್ಚು ಜೀವವೈವಿಧ್ಯ(Biodiversity) ಹೊಂದಿರುವ 17 ದೇಶಗಳಾದ 
    1. ಪಪುವಾ ನ್ಯೂ ಗಿನಿಯಾ
    2. ಆಸ್ಟ್ರೇಲಿಯಾ
    3. ಫಿಲಿಪ್ಪೀನ್ಸ್
    4. ಇಂಡೋನೇಷಿಯಾ
    5. ಮಲೇಷಿಯಾ
    6. ಚೀನಾ
    7. ಭಾರತ
    8. ಮಡಗಾಸ್ಕರ್
    9. ದಕ್ಷಿಣ ಆಫ್ರಿಕಾ
    10. ಇಕ್ವೆಡಾರ್
    11. ಕಾಂಗೋ
    12. ವೆನೆಜುಯೆಲಾ
    13. ಕೊಲಂಬಿಯಾ
    14. ಬ್ರೆಝಿಲ್
    15. ಮೆಕ್ಸಿಕೋ
    16. ಪೆರು
    17. ಅಮೆರಿಕಾ
    ಪಟ್ಟಿಯಲ್ಲಿ ಅಂದ್ರೆ  MegaDiverse Countries ಪಟ್ಟಿಯಲ್ಲಿ ಇದೂ ಇದೆ.
    • ಹಿಂದೊಮ್ಮೆ ಬಹುತೇಕ ದಕ್ಷಿಣ ಅಮೆರಿಕಾದ ದೇಶಗಳಂತೆ ಇದೂ ಕೂಡ ಸ್ಪೇನ್ ದೇಶದ ವಸಾಹತಾಗಿದ್ದು 1821ರಲ್ಲಿ ಸ್ವಾತಂತ್ರ್ಯ ಪಡೆಯಿತು.
    • ಪಶ್ಚಿಮಕ್ಕೆ ಕೊಲಂಬಿಯಾ, ಉತ್ತರಕ್ಕೆ ಕೆರಿಬಿಯನ್ ಸಮುದ್ರ & ಕೆರಿಬಿಯನ್ ದ್ವೀಪಗಳು, ಪೂರ್ವಕ್ಕೆ ಗಯಾನಾ ಮತ್ತು ದಕ್ಷಿಣಕ್ಕೆ ಬ್ರಾಝಿಲ್ ನೆರೆಹೊರೆಯಾಗಿ ಸುತ್ತುವರೆದಿವೆ.
    • ದೇಶದ ಈಶಾನ್ಯದಂಚಿಗೆ ಉತ್ತರ ಅಟ್ಲಾಂಟಿಕ್ ಮಹಾಸಾಗರ ಕೂಡ ಇಣುಕಿದೆ.
    • ವಿಸ್ತೀರ್ಣದಲ್ಲಿ 33ನೇ ಅತಿ ದೊಡ್ಡ ದೇಶ.
    • ದೇಶದ ಉತ್ತರಕ್ಕಿರುವ ಆ್ಯಂಡಿ ಪರ್ವತಗಳು ಮತ್ತು ದೇಶದ ಬ್ರೆಝಿಲ್ ಕಡೆಗಿನ ದಕ್ಷಿಣ ಭಾಗಕ್ಕಿರುವ ಅಮೆಜಾನ್ Basin ಈ ದೇಶದ ಪ್ರಮುಖ ಭೌಗೋಳಿಕ ಅಂಶಗಳಾಗಿವೆ.
    • ಜಗತ್ತಿನ ಅತಿ ಎತ್ತರದ ಆ್ಯಂಜೆಲ್ ಫಾಲ್ಸ್ ದೇಶದ ಆಕರ್ಷಣೆಗಳಲ್ಲೊಂದು.
    • Tepuis ಎನ್ನುವ ಸಮತಟ್ಟಾದ ಶಿಖರವುಳ್ಳ ಪರ್ವತ ಮಾದರಿಗಳೂ ಈ ದೇಶದ ಆಕರ್ಷಣೆಯ ಬಿಂದುವಾಗಿವೆ.
    • ಪೆಟ್ರೋಲಿಯಂ & ನೈಸರ್ಗಿಕ ಅನಿಲ ಈ ದೇಶದ ಪ್ರಾಕೃತಿಕ ಸಂಪತ್ತಿನಲ್ಲಿ ಅಗ್ರ ಸ್ಥಾನದಲ್ಲಿವೆ.
    • ಜೂನ್ ನಿಂದ ಅಕ್ಟೋಬರ್ ವರೆಗೆ ಮಳೆಗಾಲವಿದ್ದು ಇನ್ನುಳಿದ ವರ್ಷವಿಡೀ ಒಣಬೇಸಿಗೆ ರೂಪದ ವಾತಾವರಣವಿರುತ್ತದೆ.
    ಆದರೆ ಅದೇಕೆ ಈ ಡಿಸೆಂಬರ್ ನಲ್ಲಿ ಇಂಥ ಕುಂಭದ್ರೋಣ ಮಳೆ ಸುರಿಯುತ್ತಿದೆ ಅಂತೀರಾ ? ನಾವು ಮಾಡಿದ ಪಾಪವನ್ನ ನಾವೇ ಉಣ್ಣಬೇಕಲ್ಲಾ !! ಪ್ರಕೃತಿಗೆ ಧಕ್ಕೆ ನೀಡುವಾಗ ಬರದ ಚಿಂತೆ ಅದು ಮುನಿಸಿಕೊಂಡಾಗ  ಏಕೆ ?!! ನಮಗೆ ಯಾರಾದರೂ ತೊಂದರೆ ಮಾಡಿದಾಗ ನಾವು ಅವರಿಗೆ ತಿರುಗಿ 'ನೀಡು'ವುದು ಎಷ್ಟು ನ್ಯಾಯಸಮ್ಮತವೋ ಪ್ರಕೃತಿಯ ಈ ಮುನಿಸೂ ಅಷ್ಟೇ ನ್ಯಾಯಸಮ್ಮತ. ಅಲ್ವೇನ್ರೀ ?!!
    • ಇದೇ ನೆಪದಲ್ಲಿ ಡಿಸ್ನಿ ಪಿಕ್ಸಾರ್ ನವರು ತಯಾರಿಸಿರುವ UP ಚಿತ್ರ ನೋಡಲು ನಿಮಗೆ ಸಲಹೆ ನೀಡ್ತಿದೀನಿ. ಆ ಚಿತ್ರ ಇದೇ ಭಾಗವನ್ನ ಕಲ್ಪಿಸಿಕೊಂಡು ತಯಾರಿಸಲಾಗಿರುವ Very Cute Animation ಚಿತ್ರ. ಚಿತ್ರ ನೋಡೋದನ್ನ ಮರೀಬೇಡಿ ಮತ್ತೆ. ಹಾಗೇ ಪ್ರತಿಕ್ರಿಯಿಸೋದನ್ನ ಕೂಡ !!

    : ರವಿ

    ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

    ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ